ಆರೂವರೆ ಕೋಟಿ ಮೌಲ್ಯದ MI ಮೊಬೈಲ್‍ಗಳಿರುವ ಟ್ರಕ್ ರಾಬರಿ ಮಾಡಿದ ಖದೀಮರು

Public TV
2 Min Read

ಕೋಲಾರ: ಆರೂವರೆ ಕೋಟಿ ರೂ. ಮೌಲ್ಯದ ಎಂಐ ಮೊಬೈಲ್‍ಗಳ ಟ್ರಕ್ ರಾಬರಿ ಮಾಡಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ನಡೆದಿದೆ.

ಚೆನ್ನೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಲೇ ಇರುತ್ತವೆ. ಹೆದ್ದಾರಿಯಲ್ಲಿ ಕತ್ತಲ ರಾತ್ರಿಯಲ್ಲಿ ಸಿನಿಮೀಯ ರೀತಿಯಲ್ಲಿ ಭರ್ಜರಿ ರಾಬರಿಯೊಂದು ನಡೆದಿದೆ. ಬರೋಬ್ಬರಿ ಆರೂವರೆ ಕೋಟಿ ರೂ. ಮೌಲ್ಯದ ಎಂಐ ಮೊಬೈಲ್‍ಗಳನ್ನು ತುಂಬಿ ಬರುತ್ತಿದ್ದ ಲಾರಿಯನ್ನು ರಾಬರಿ ಮಾಡಲಾಗಿದೆ.

ಬೆಂಗಳೂರಿನ ಶ್ರೀಜಿ ಟ್ರಾನ್ಸ್​ಪೋರ್ಟ್ ಒಂದು ಕಂಟೈನರ್ ಲಾರಿ, ನಿನ್ನೆ ಮಧ್ಯಾಹ್ನ 3 ಗಂಟೆಗೆ ಚನ್ನೈ ನಿಂದ ಸುಮಾರು 6:39 ಕೋಟಿ ರೂ ಮೌಲ್ಯದ ಎಂ.ಐ. ಕಂಪನಿಯ ಮೊಬೈಲ್‍ಗಳನ್ನು ತುಂಬಿಕೊಂಡು ಹೊರಟಿತ್ತು, ಲಾರಿ ಡ್ರೈವರ್ ಸುರೇಶ್ ನಿನ್ನೆ ರಾತ್ರಿ 9:30 ರ ಸುಮಾರಿಗೆ ರಾಜ್ಯದ ಗಡಿ ಪ್ರವೇಶಮಾಡಿದ್ದಾನೆ. ನಂಗಲಿ ಟೋಲ್ ಬಳಿ ಲಾರಿ ನಿಲ್ಲಿಸಿ ನಂತರ ಮೂತ್ರ ವಿಸರ್ಜನೆ ಮಾಡಿ ಮತ್ತೆ ಹೊರಟಿದ್ದಾನೆ. ಲಾರಿ ಮುಳಬಾಗಿಲು ತಾಲ್ಲೂಕು ದೇವರಾಯಸಮುದ್ರ ಬಳಿ ಬರುತ್ತಿದ್ದಂತೆ ಒಂದು ಕಾರಿನಲ್ಲಿ ಬಂದ ಆರು ಜನರ ತಂಡ ಲಾರಿ ಅಡ್ಡಗಟ್ಟಿ ಜಗಳ ಶುರುಮಾಡಿದ್ದಾರೆ. ಇದನ್ನೂ ಓದಿ: ಬಾರ್ ಬೇಕು, ಬೇಡ -ಡಿಸಿ ಕಚೇರಿ ಮುಂದೆ ಮಹಿಳೆಯರು, ಪುರುಷರ ಹೈಡ್ರಾಮಾ

ನಂತರ ಲಾರಿ ಡ್ರೈವರ್ ಸುರೇಶ್‍ನನ್ನು ಹೆದ್ದಾರಿಯಿಂದ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹೊಡೆದು ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಅವನನ್ನು ಅಲ್ಲೇ ಬಿಟ್ಟು ಬಂದು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿದ್ದ, ಮೊಬೈಲ್‍ಗಳನ್ನು ಇನ್ನೊಂದು ಲಾರಿಗೆ ತುಂಬಿಸಿಕೊಂಡು ನಂತರ ಲಾರಿಯನ್ನು ಅಲ್ಲಿಂದು ಸುಮಾರು ಎಂಟು ಕಿ.ಮೀ. ದೂರದ ಕೋಲಾರ ತಾಲ್ಲೂಕು ನೆರ್ನಹಳ್ಳಿ ಬಳಿ ಬಿಟ್ಟು ಹೋಗಿದ್ದಾರೆ. ರಾತ್ರಿ ಇಡೀ ನಿರ್ಜನ ಪ್ರದೇಶದಲ್ಲಿ ಕಳೆದ ಡ್ರೈವರ್ ಸುರೇಶ್ ಬೆಳಿಗ್ಗೆ 9:30ರ ಸುಮಾರಿಗೆ ಹೆದ್ದಾರಿ ಬಳಿ ಬಂದು ಸ್ಥಳೀಯರ ಸಹಾಯ ಪಡೆದು ನಂತರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುಮಾರು ಆರೂವರೆ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನವಾಗಿರುವುದು ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕೋಲಾರ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ ಡ್ರೈವರ್ ಸುರೇಶ್‍ನಿಂದ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು, ರಾಬರಿ ಟೀಂ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಬೆರಳಚ್ಚು ತಜ್ಞರ ತಂಡ, ಹಾಗೂ ಕೋಲಾರ ಎಸ್‍ಪಿ ಕಿಶೋರ್ ಬಾಬು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಸುಳಿವಿಗಾಗಿ ಹುಡುಕಾಟ ಶುರುಮಾಡಿದ್ದಾರೆ. ಇದೊಂದು ಪ್ರೀಪ್ಲಾನ್ ರಾಬರಿ ಎನ್ನಲಾಗಿದ್ದು, ಡ್ರೈವರ್ ಸುರೇಶ್ ನೀಡಿರುವ ಕೆಲವೊಂದು ಮಾಹಿತಿ ಆಧರಿಸಿ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ಪೊಲೀಸರು ನೀಡಿದ್ದಾರೆ.

ಪ್ರತಿಷ್ಠಿತ ಮೊಬೈಲ್ ಕಂಪನಿಯ ಕೋಟ್ಯಂತರ ರೂಪಾಯಿ ಮೌಲ್ಯದ ಮೊಬೈಲ್‍ಗಳು ಇಷ್ಟು ಸುಲಭವಾಗಿ ರಾಬರಿಕೋರರ ಪಾಲಾಗಿದೆ ಅಂದರೆ ಈ ಪ್ರಕರಣದಲ್ಲಿ ಒಳಗಿನವರದ್ದೇ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಆದಷ್ಟು ಬೇಗ ಈ ಕಳ್ಳರ ತಂಡವನ್ನು ಬಂಧಿಸಿದರೆ ಎಲ್ಲಾ ಅನುಮಾನ ಆತಂಕಕಗಳಿಗೆ ತೆರೆ ಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *