ಆನ್‍ಲೈನ್ ಶಿಕ್ಷಣ ಗುಣಮಟ್ಟ ಅರಿಯುವ ಅಭಿಯಾನಕ್ಕೆ ಶಿಕ್ಷಣ ಸಚಿವರಿಂದ ಚಾಲನೆ

Public TV
1 Min Read

ಬೆಂಗಳೂರು: ಈಗ ಆರಂಭವಾಗಿರುವ ಆನ್‍ಲೈನ್ ಶಿಕ್ಷಣದ ಕಲಿಕಾ ಗುಣಮಟ್ಟ ಅರಿಯುವ ಕುರಿತು ವಿದ್ಯಾವಿನ್-ಶೈಕ್ಷಣಿಕ ಆ್ಯಪ್ ವಿದ್ಯಾಸಂಸ್ಥೆ ಕೈಗೆತ್ತಿಕೊಂಡಿರುವ ಅಭಿಯಾನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.

ಕೋವಿಡ್‍ನಿಂದಾಗಿ ಸಾಂಪ್ರದಾಯಿಕ ತರಗತಿಗಳು ಆರಂಭವಾಗದೇ ಕೇವಲ ಆನ್‍ಲೈನ್ ತರಗತಿಗಳು ನಡೆಯುತ್ತಿರುವ ಈ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮತ್ತು ಅದರಲ್ಲಿರುವ ಸಾಧ್ಯತೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾವಿನ್ ಸಂಸ್ಥೆ ರಾಜ್ಯಾದ್ಯಂತ ಆನ್‍ಲೈನ್ ಶಿಕ್ಷಣ ಕೈಗೊಂಡಿರುವ ಅಭಿಯಾನ ಉತ್ತಮವಾಗಿದೆ ಎಂದು ಸಚಿವರು ಹೇಳಿದರು.

ಮಕ್ಕಳಿಗೆ ಮಿಸ್ಡ್‍ಕಾಲ್ ನೀಡಿದ ತಕ್ಷಣವೇ ಪ್ರಶ್ನಾವಳಿ ಡೌನ್‍ಲೋಡ್ ಮಾಡುವ ವ್ಯವಸ್ಥೆ ಇದ್ದು, ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ತಿಳಿಯುತ್ತದೆ. ಇದರ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಪ್ರತಿಭಾಶಾಲಿ ವಿದ್ಯಾರ್ಥಿಗೆ ಟ್ಯಾಬ್ ಮತ್ತು ಪ್ರತಿ ಜಿಲ್ಲೆಯಲ್ಲಿ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಆ್ಯಪ್ ಆಧಾರಿತ ಶಿಕ್ಷಣ ನೀಡುತ್ತಿರುವದು ಅಭಿಯಾನದಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಕೆ.ಆರ್. ಪ್ರಕಾಶ್ ಮಾತನಾಡಿ, ಈ ಅಭಿಯಾನ ಎರಡು ತಿಂಗಳು ನಡೆಯಲಿದೆ. ಗುಣಮಟ್ಟದ ಪೂರಕ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿಕೊಡಲಿದೆ. ವಿದ್ಯುನ್ಮಾನ ಆ್ಯಪ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಅಂತರ ನಿವಾರಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಅಭಿಯಾನದಲ್ಲಿ ಭಾಗವಹಿಸುವ ಮಕ್ಕಳಿಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಜೊತೆಗೆ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು. ಪತ್ರಕರ್ತರಾದ ಬಾಲಕೃಷ್ಣ ಬಳ್ಳಕ್ಕ ಮತ್ತು ರವಿಶಂಕರ ಬೆಟ್ಟಂಪಾಡಿ ಮತ್ತಿತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *