ಆನ್‍ಲೈನ್ ವಂಚನೆ ಮೂಲಕ 1.37 ಲಕ್ಷ ರೂ. ಎಗರಿಸಿದ ಖದೀಮ

Public TV
1 Min Read

ದಾವಣಗೆರೆ: ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕರನ್ನು ನಂಬಿಸಿ ಆತನ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ಆನ್‍ಲೈನ್ ಮೂಲಕ ದೋಚಿರುವ ಬಗ್ಗೆ ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕರೂರಿನಲ್ಲಿರುವ ಷಾ ಇನ್ಫ್ರಾ ಟವರ್ಸ್‍ನ ಪ್ರಧಾನ ವ್ಯವಸ್ಥಾಪಕ ದಿರೇಂದ್ರ ಪ್ರತಾಪ್ ಸಿಂಗ್ ಹಣ ಕಳೆದುಕೊಂಡವರು. ಪ್ರತಾಪ್ ಸಿಂಗ್ ಎಸ್‍ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿನ ಹೆಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿಯೂ ಖಾತೆಯನ್ನು ಹೊಂದಿದ್ದಾರೆ. ಇವರು ದೈನಂದಿನ ವ್ಯವಹಾರವನ್ನು ಆನ್‍ಲೈನ್ ಮೂಲಕವೇ ನಡೆಸುತ್ತಿದ್ದರು. ಸೋಮವಾರ ಅವರ ಮೊಬೈಲ್ ನಂಬರಿಗೆ ಕರೆ ಮಾಡಿದ ಅಪರಿಚಿತ, ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಅಧಿಕಾರಿ ಎಂದು ನಂಬಿಸಿದ್ದಾನೆ.

ನಿಮ್ಮ ಖಾತೆ ಅವಧಿ ಮುಕ್ತಾಯವಾಗಿದೆ ಪರಿಣಾಮ ಕೆವೈಸಿ ಆಪ್ ಡೇಟ್ ಮಾಡುವಂತೆ ತಿಳಿಸಿದ್ದಾನೆ. ಅಪರಿಚಿತನ ಮಾತು ಮಾತು ನಂಬಿದ್ದ ಅವರು ಆಪ್ ಡೇಟ್ ಮಾಡಲು ವಂಚಕನಿಗೆ ತಿಳಿಸಿದ್ದಾನೆ. ಈ ವೇಳೆ ಅಪರಿಚಿತ ಫೋನ್‍ನಲ್ಲಿ ಕೆಲ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಲು ತಿಳಿಸಿದ್ದಾನೆ. ಇದರಂತೆ ಪ್ರತಾಪ್ ಸಿಂಗ್ ಅವರು ಇನ್‍ಸ್ಟಾಲ್ ಮಾಡಿದ್ದು, ಕೆಲ ಸಮಯದ ನಂತರ ಹೆಚ್‍ಡಿಎಫ್‍ಸಿ ಬ್ಯಾಂಕ್ ಖಾತೆಯಿಂದ 7 ಬಾರಿ 54,500 ರೂ. ಕಡಿತವಾದ ಬಗ್ಗೆ ಫೋನ್‍ಗೆ ಮೆಸೇಜ್ ಬಂದಿದೆ. ಈ ವೇಳೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮತ್ತೆ ಅಪರಿಚಿತ ಕರೆ ಮಾಡಿ ಹಣ ವಾಪಸ್ ಕಳುಹಿಸುವುದಾಗಿ ತಿಳಿಸಿದ್ದಾನೆ.

ಆ ಬಳಿಕ ಎಸ್‍ಬಿಐ ಕ್ರೆಡಿಟ್ ಕಾರ್ಡ್ ಖಾತೆಗಳಿಂದ ಒಟಿಪಿ ಬಳಸಿಕೊಂಡು 82,797 ರೂ. ಹಣ ಡ್ರಾ ಮಾಡಿರುವ ಮೆಸೇಜ್‍ಗಳು ಪ್ರತಾಪ್ ಸಿಂಗ್ ಫೋನ್‍ಗೆ ಬಂದಿದೆ. ಆ ಬಳಿಕ ತಾವು ಮೋಸ ಹೋಗುತ್ತಿರುವುದಾಗಿ ತಿಳಿದಿ ಪ್ರತಾಪ್ ಸಿಂಗ್ ಅವರು ತಕ್ಷಣ ಬ್ಯಾಂಕ್ ಕಸ್ಟಮರ್ ಸಂಖ್ಯೆಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಆದರೆ ಅಷ್ಟರಲ್ಲಿ ವಂಚಕ ಎರಡು ಖಾತೆಗಳಿಂದ ಒಟ್ಟು 1,37,297 ರೂ.ಗಳನ್ನು ದೋಚಿದ್ದ. ಸದ್ಯ ಪ್ರತಾಪ್ ಸಿಂಗ್ ಅವರು ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *