ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

Public TV
2 Min Read

ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *