ಆನೆ ಆಯ್ತು, ಈಗ ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿದ ಕೀಚಕರು

Public TV
1 Min Read

ಶಿಮ್ಲಾ: ಕೇರಳದಲ್ಲಿ ಸ್ಫೋಟಕ ತಿನ್ನಿಸಿ ಗರ್ಭಿಣಿ ಆನೆಯನ್ನು ಕೊಂದ ಅಮಾನವೀಯ ಘಟನೆ ಮಾಸುವ ಮುನ್ನವೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟಕ ಸೇವಿಸಿ ಹಸುವಿನ ಬಾಯಿ ಸಂಪೂರ್ಣ ಬ್ಲಾಸ್ಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೇರಳದಲ್ಲಿ ನಡೆದ ಘಟನೆಯ ಬಳಿಕ ಮಾನವನ ಕ್ರೌರ್ಯವನ್ನು ತೋರಿಸುವ ಇನ್ನೊಂದು ಘಟನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆದ ನಂತರ ಈ ಘಟನೆ ಬಿಲಾಸ್ಪುರ್ ಜಿಲ್ಲೆಯ ಜಂಡುಟ್ಟಾ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಹಸುವಿನ ಮಾಲೀಕರು, ಗೋದಿ ಹಿಟ್ಟಿನಲ್ಲಿ ಸ್ಫೋಟಕವನ್ನು ತುಂಬಿ ಹಸುವಿಗೆ ತಿನ್ನಿಸಲಾಗಿದೆ. ಇದು ನರೆಮನೆಯವರು ಮಾಡಿರುವ ಕೃತ್ಯ ಎಂದು ಆರೋಪಿಸಿದ್ದಾರೆ. ಜೊತೆಗೆ ಅಪರಾಧ ಬೆಳಕಿಗೆ ಬಂದಾಗ ಅವರು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಈಗಾಗಲೇ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದು, ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *