ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ

Public TV
3 Min Read

ಬೆಂಗಳೂರು: ಮೂಡಿಗೆರೆ ತಾಲೂಕನ್ನು ಅತಿವೃಷ್ಟಿಯ ಪಟ್ಟಿಗೆ ಸೇರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧವೇ ಶಾಸಕ ಎಂಪಿ ಕುಮಾರಸ್ವಾಮಿಯವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ.

ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲಿ ಯಾಕೋ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕೊ ಯಾಕೋ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ ರೀತಿ ತಾರತಮ್ಯ ಮಾಡಬಾರದು. ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅಂತ ಅನಿಸುತ್ತಿದೆ. ಏಕಾಏಕಿ ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರ ಕೈಬಿಡಲಾಗಿದೆ. ಆರ್. ಅಶೋಕ್ ಈ ತರಹ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಎಲ್ಲ ಉಸ್ತುವಾರಿ ಮಂತ್ರಿಗಳು ಬರುತ್ತಾರೆ. ಆದರೆ ಏನೂ ಮಾಡಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದರೆ ಅರ್ಥ ಆಗುವುದಿಲ್ಲ. ಎನ್‍ಡಿಆರ್‍ಎಫ್ ಪಟ್ಟಿಯಲ್ಲಿ ಮೂಡಿಗೆರೆ ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಬೇಕು ಅದಕ್ಕಾಗಿ ನಾನು ಇಲ್ಲಿಯೇ ಕೂರುತ್ತೇನೆ ಎಂದು ಎಂ.ಪಿ ಕುಮಾರಸ್ವಾಮಿ ಪ್ರತಿಭಟನೆ ನಡೆಸಿದರು.

2019 ರಲ್ಲಿ ಅತಿವೃಷ್ಟಿ ಆಗಿತ್ತು. ಈ ವೇಳೆ ಮನೆಗಳು ಕಾಫಿತೋಟ ಕೊಚ್ಚಿಕೊಂಡು ಹೋಗಿತ್ತು. ಅಲ್ಲದೇ 6 ಜನ ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು. ಶಿವಮೊಗ್ಗ ನಗರ ಎನ್‌ಡಿಆರ್‌ಎಫ್‌ ವ್ಯಾಪ್ತಿಗೆ ಸೇರುತ್ತದೆ. ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದೆ. ನಾನು 2018 ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ನಮಗೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಶಾಸಕ ಎಂಪಿ ಕುಮಾರಸ್ವಾಮಿ ಪ್ರತಿಭಟನೆ ಹಿನ್ನೆಲೆ ಕಂದಾಯ ಸಚಿವ ಆರ್ ಅಶೋಕ್ ತಮ್ಮ ಆಪ್ತ ಕಾರ್ಯದರ್ಶಿಯನ್ನು ಸಂಧಾನಕ್ಕೆ ಕಳುಹಿಸಿದರು. ಅಶೋಕ್ ತಮ್ಮ ಪಿಎಸ್ ಪ್ರಶಾಂತ್ ರಿಂದ ಫೋನ್ ಮೂಲಕ ಸಂಪರ್ಕಿಸಿ ಎಂಪಿ ಕುಮಾರಸ್ವಾಮಿ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಎಂ.ಪಿ ಕುಮಾರಸ್ವಾಮಿಯವರು ಕರೆಯನ್ನು ನಿರಾಕರಿಸಿ ಹೇಳಿದ ಒಂದು ಕೆಲಸವನ್ನೂ ಮಾಡಿಕೊಡಲ್ಲ, ಅಶೋಕ್‍ರವರೇ ಸ್ಥಳಕ್ಕೆ ಬರಲಿ ಎಂದು ಹೇಳಿದರು.

ಅಶೋಕ್ ಸಂಧಾನ:
ನಂತರ ಎಂಪಿ ಕುಮಾರಸ್ವಾಮಿ ಸಿಟ್ಟಿಗೆ ಬೆದರಿ ಪ್ರತಿಭಟನಾ ಸ್ಥಳಕ್ಕೆ ಆರ್. ಅಶೋಕ್ ಆಗಮಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿಯವರು ನಾನು ಹಿರಿಯ ಶಾಸಕ, ನನಗೆ ಹೀಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ದರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ತೂಕ ಇಲ್ಲ ಅಂದರೆ ಹೇಗೆ? ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಈ ವೇಳೆ ಅವರ ಹೆಗಲ ಮೇಲೆ ಕೈ ಹಾಕಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿ ಕುಮಾರಸ್ವಾಮಿ ಮನವೊಲಿಸಿ ಆರ್. ಅಶೋಕ್ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ನಾನು ಕುಮಾರಸ್ವಾಮಿ 20 ವರ್ಷದಿಂದ ಸ್ನೇಹಿತರು. ಅನುದಾನ ಸಮಸ್ಯೆ ಆಗಿದೆ. ಬೆಳೆ ಪರಿಹಾರ ವಿನಂತಿ ಇದೆ. ಸಿಎಂ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ತಾರತಮ್ಯಕ್ಕೂ ಸಿಟಿ. ರವಿ ಕಾರಣ ಎಂಬ ಆರೋಪಕ್ಕೆ, ಸಿಟಿ ರವಿ ನನಗೆ 10-12 ದಿನದಿಂದ ಯಾವುದೇ ಕರೆ ಮಾಡಿಲ್ಲ. ಸಿಟಿ ರವಿ ಜೀವರಾಜ್ ಬೆಳ್ಳಿ ಪ್ರಕಾಶ್ ಸುರೇಶ್ ಮಧ್ಯೆ ಯಾವುದೇ ರೀತಿ ಭಿನ್ನಾಭಿಪ್ರಾಯ ಇಲ್ಲ. ಮೂಡಿಗೆರೆ ಚಿಕ್ಕಮಗಳೂರಿಗೆ ಬಹಳ ಬಾರಿ ಪ್ರೀತಿ ವಿಶ್ವಾಸದಿಂದ ಹೋಗಿದ್ದೇನೆ. ಚಿಕ್ಕಮಗಳೂರು ಹೊಸದೇನಲ್ಲ. ನಮ್ಮ ಪಾರ್ಟಿ ಹೇಗೆ ಅಂದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಂ ಬಗ್ಗೆ ಪ್ರಶ್ನೆಗಳನ್ನು ಕೇಳ್ಬೇಡಿ, ಅಷ್ಟು ಕೆಳಮಟ್ಟಕ್ಕೆ ನನ್ನ ಇಳಿಸ್ಬೇಡಿ: ಹೆಚ್‍ಡಿಡಿ

Share This Article
Leave a Comment

Leave a Reply

Your email address will not be published. Required fields are marked *