ಆಟೋ ಡ್ರೈವರ್ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕ

Public TV
2 Min Read

– ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು

ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು, ಅವರನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ನಟಿ ರಚಿತಾ ರಾಮ್ ನೋಡಲು ಆಟೋ ಚಾಲಕರೊಬ್ಬರು ಅವರ ಮನೆಯ ಬಳಿಯೇ ಕಾದು ಕುಳಿತ್ತಿದ್ದರು. ಅವರ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕರಾಗಿದ್ದಾರೆ.

ನಟಿ ರಚಿತಾ ರಾಮ್ ಆಟೋ ಡ್ರೈವರ್ ಅಭಿಮಾನವನ್ನು ಕಂಡು ಭಾವುಕರಾದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
“ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ. ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತಪಡಿಸುತ್ತಾರೆ. ಇದರಿಂದ ತುಂಬಾ ಸಂತೋಷ ಆಗುತ್ತೆ. ಆದರೆ ಬೆಳಗ್ಗೆ ಅಮ್ಮ ಬಂದು “ರಚ್ಚು ಬೆಳಗ್ಗೆ ಬೆಳಗ್ಗೆನೇ ಯಾರೋ ಮನೆ ಮುಂದೆ ಕಾಯುತ್ತಿದ್ದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡಿದೆ.

ಈ ವೇಳೆ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ದರು. ನನ್ನ ನೋಡುತ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದರು. ನಂತರ ನಾನು ಅವರ ಬಳಿ ಹೋಗುತ್ತಿದ್ದಂತೆ ನನ್ನ ಒಂದು ಮಾತು ಆಡಕ್ಕೂ ಬಿಡದೆ, “ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ ಮೇಡಂ, ನನ್ನ ಆಟೋ ಮೇಲೆ ಮೊದಲ ಫೋಟೋ ನಿಮ್ಮದೇ ಇರಬೇಕು ಮೇಡಂ” ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡಿಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡರು.

ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು. ಈ ವೇಳೆ ನಾನು ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೀನಿ.

https://www.instagram.com/p/CCJU_4eg7Qq/?igshid=21r4ng4ded5k

ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು
ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ. ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್‍ಸ್ಟಾಗ್ರಾಂನ ಖಾತೆಯಲ್ಲಿ ಹಾಕಿ ನನ್ನನ್ನ ಟ್ಯಾಗ್ ಮಾಡಿ. ನಾನು ರೀ ಪೋಸ್ಟ್ ಮಾಡುತ್ತೇನೆ. ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ” ಎಂದು ಭಾವುಕದಿಂದ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *