ಆಟೋ ಚಾಲಕನ ಮಗ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ

Public TV
1 Min Read

ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾವಣಗೆರೆಯ ಹರಿಹರ ತಾಲೂಕಿನ ಎಂಕೆಇಟಿ ಶಾಲೆಯ ಅಭಿಷೇಕ್‌ ಕನ್ನಡ ಮಾಧ್ಯಮದಲ್ಲಿ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದಾನೆ.

ಗುತ್ತೂರು ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ಅವರ ಮೊದಲನೇ ಮಗ ಅಭಿಷೇಕ್ ಬಡತನಲ್ಲಿ ಬೆಳೆದು ಛಲದಿಂದ ಓದಿ ಈ ಸಾಧನೆ ಮಾಡಿದ್ದಾನೆ. ತಂದೆ ಅಟೋ‌ಚಾಲನೆ ಮಾಡುತ್ತಿದ್ದರೆ ತಾಯಿ ಕೂಲಿ‌ ಕೆಲಸ ಮಾಡಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದಾರೆ. ಇವರ ಕಷ್ಟ ನೋಡಿದ ಅಭಿಷೇಕ್ ಅತ್ಯಂತ ಶ್ರಮವಹಿಸಿ ಓದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.

ಮನೆಯಿಂದ‌ ಶಾಲೆಗೆ ಆರು ಕಿಲೋಮೀಟರ್ ಇದ್ದು ಅಷ್ಟು ದೂರ ಸೈಕಲ್‌ನಲ್ಲಿ ಹೋಗುತ್ತಿದ್ದ. ಮನೆಯ ಬಡತನವನ್ನು ನೋಡಿ ಗುತ್ತೂರು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಗೀತಾ ಈತನ ಓದಿನ ಖರ್ಚನ್ನು ಭರಿಸಿ ಎಂಕೆಇಟಿ ಪ್ರೌಢಶಾಲೆಗೆ ಸೇರಿಸಿದ್ದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ರಿಸಲ್ಟ್‌ – ಈ ಬಾರಿ ಜಿಲ್ಲೆಗಳಿಗೆ ಗ್ರೇಡ್‌ ನೀಡಿದ್ದು ಯಾಕೆ?

ಕನ್ನಡ 125, ಇಂಗ್ಲಿಷ್ 100, ಹಿಂದಿ 100, ಗಣಿತ 100, ವಿಜ್ಞಾನ 100 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಅಭಿಷೇಕ್‌ ಪಡೆದುಕೊಂಡಿದ್ದಾನೆ. ‌625ಕ್ಕೆ 625 ತೆಗೆಯುವ ಕನಸು ಎರಡು ಅಂಕಗಳಲ್ಲಿ ಹೋಗಿದೆ. ಇಡೀ ರಾಜ್ಯಕ್ಕೆ ಪ್ರಥಮ ಬಂದರೂ ಎರಡು ಅಂಕ‌ ಮಿಸ್ ಮಾಡಿಕೊಂಡೆ ಎನ್ನುವ ನೋವು ಅಭಿಷೇಕ್‌ನಲ್ಲಿದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡು‌‌ ಎಂಜಿನಿಯರ್ ಆಗುವ ಆಸೆ ಹೊರ ಹಾಕಿದ್ದಾ‌ನೆ. ಇದನ್ನೂ ಓದಿ: 6 ಮಂದಿಗೆ 625 ಅಂಕ – ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ

ಇಡೀ ಶಾಲೆಗೆ ನೀನು ಲೀಡರ್ ಆಗಬೇಕು ಎಂದಾಗ, ಇಲ್ಲ ಸರ್ ನಾನು ಓದಬೇಕು ನನ್ನ ಓದಿಗೆ ಅಡ್ಡವಾಗುತ್ತೆ ಎಂಬುದಾಗಿ ಅಭಿಷೇಕ್‌ ಹೇಳಿದ್ದ ಎಂದು ಶಿಕ್ಷಕರು ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *