ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

Public TV
2 Min Read

– ಉತ್ತರ ಪ್ರದೇಶದಲ್ಲಿ ಗುಲಾಮ ಮನಸ್ಥಿತಿಗೆ ಸ್ಥಾನವಿಲ್ಲ

ಲಕ್ನೋ: ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ಆವರಣದಲ್ಲಿರುವ ಮೊಘಲ್ ವಸ್ತು ಸಂಗ್ರಹಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗಿದೆ. ಈ ಕುರಿತು ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಇಂತಹ ಗುಲಾಮ ಮನಸ್ಥಿತಿಯ ಯಾವುದೇ ವಿಷಯವನ್ನು ಬಿಜೆಪಿ ಸರ್ಕಾರ ತೆಗೆದು ಹಾಕುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿರ್ಮಾಣ ಹಂತದಲ್ಲಿರುವ ಆಗ್ರಾದ ವಸ್ತುಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಉತ್ತರ ಪ್ರದೇಶದಲ್ಲಿ ಗುಲಾಮಿ ಮನಸ್ಥಿತಿಗಳಿಗೆ ಯಾವುದೇ ರೀತಿಯ ಸ್ಥಾನವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಕೇವಲ ಆಗ್ರಾದ ವಸ್ತುಸಂಗ್ರಹಾಲಯ ಮಾತ್ರವಲ್ಲ ಅಲಹಬಾದ್‍ಗೆ ಪ್ರಯಾಗ್‍ರಾಜ್ ಸೇರಿ ಯೋಗಿ ಆದಿತ್ಯನಾಥ್ ಅವರು ತಮ್ಮ 3 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಸ್ಥಳಗಳು, ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ಗುಲಾಮಿ ಸಂಸ್ಕೃತಿಗೆ ಉತ್ತರ ಪ್ರದೇಶದಲ್ಲಿ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ.

ಮೊಘಲ್ ಮ್ಯೂಸಿಮ್ ಯೋಜನೆಯನ್ನು ಕಳೆದ ಬಾರಿಯ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ 2015ರಲ್ಲಿ ಜಾರಿಗೆ ತರಲಾಗಿತ್ತು. ತಾಜ್ ಮಹಲ್ ಬಳಿಯ ಒಟ್ಟು 6 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಮೊಘಲ್ ಸಂಸ್ಕೃತಿ, ಕಲಾಕೃತಿಗಳು, ವರ್ಣಚಿತ್ರಗಳು, ಪಾಕ ಪದ್ಧತಿ, ವೇಷ ಭೂಷಣ, ಮೊಘಲ್ ಯುಗ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಹಾಗೂ ಪ್ರದರ್ಶನ ಕಲೆಗಳನ್ನು ಒಳಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *