ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

Public TV
2 Min Read

ಬೆಂಗಳೂರು: ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ ಬ್ಲೂ ಮೂನ್ ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಏನಿದು ಬ್ಲೂಮೂನ್? ಯಾವಾಗ ನೀಲಿಚಂದ್ರ ಗೋಚರಿಸ್ತಾನೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಏನಿದು ಬ್ಲೂ ಮೂನ್?
ಇಂದು ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ 8.19ಕ್ಕೆ ಸರಿಯಾಗಿ ಬ್ಲೂ ಮೂನ್ ಗೋಚರವಾಗಲಿದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ತಿಂಗಳ ಎರಡನೇ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅ.1 ರಂದು ಮೊದಲ ಹುಣ್ಣಿಮೆ ಬಂದಿದ್ದರೆ ಅ.31ರಂದು ಇಂದು ಎರಡನೇ ಹುಣ್ಣಿಮೆ ಬಂದಿದೆ.

ಎಷ್ಟು ಅವಧಿ ಬೇಕು?
ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. 30 ದಿನ ತುಂಬಲು ಬಾಕಿ ಉಳಿದ ಸಮವೆಲ್ಲ ಸೇರಿ ಕೊನೆಗೆ ಒಂದು ತಿಂಗಳಿನಲ್ಲಿ 2 ಹುಣ್ಣಿಮೆ ಬರುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ 2018ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. 31 ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ 30 ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪ.

ಖಗೋಳ ತಜ್ಞರು ಏನು ಹೇಳುತ್ತಾರೆ?
ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು ಸ್ವಾಭಾವಿಕ ಹುಣ್ಣಿಮೆ. ಆದರೆ ಅಪರೂಪ ಅಷ್ಟೇ. ಎಲ್ಲಾ ಹುಣ್ಣಿಮೆಯ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂಮೂನ್ ಎಂದಾಕ್ಷಣ ಇಂದು ಚಂದಿರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂಮೂನ್‍ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ಲಾನಿಟೋರಿಯಂ ಹಿರಿಯ ವಿಜ್ಞಾನಿ ಡಾ.ಆನಂದ್ ಹೇಳಿದ್ದಾರೆ.

ಜ್ಯೋತಿಷಿಗಳು ಏನ್ ಹೇಳುತ್ತಾರೆ?
ಈ ಬಾರಿಯ ಬ್ಲೂ ಮೂನ್ ಶುಭಕಾರಕವಾಗಿದ್ದು ನೀಲಚಂದ್ರನ ದರ್ಶನದಿಂದ ಲೋಕ ಕ್ಷೇಮ. ಶಾಂತಿ, ನೆಮ್ಮದಿ ದಯಪಾಲಿಸುತ್ತದೆ. ಆದರೆ ಕೆಲವು ಜನರಿಗೆ ಈ ಬ್ಲೂ ಮೂನ್ ಬಾಧಕಾರಕವಾಗಲಿದೆ. ಶೀಘ್ರವೇ ಕೋವಿಡ್‍ನಿಂದ ಜಗತ್ತಿಗೆ ಮುಕ್ತಿ ಸಿಗಲಿದೆ ಎಂದು ಗವಿ ಗಂಗಾಧರ ದೇವಾಲಯದ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

ಈ ಬಾರಿಯ ಹುಣ್ಣಿಮೆಯಿಂದ ಒಂದಿಷ್ಟು ಜನಕ್ಕೆ, ಒಂದಿಷ್ಟು ರಾಶಿಯವರಿಗೆ ಸಮಸ್ಯೆಯಾಗಬಹುದು. ದೇವಿ ಅಥವಾ ಪರಶಿವನ ಆರಾಧನೆಯಿಂದ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿಯ ವೈಪರೀತ್ಯ ಆಗಲಿದೆ. ಕೋವಿಡ್ ಮಹಾಮಾರಿಯಿಂದ ಸದ್ಯದಲ್ಲೇ ಮುಕ್ತಿ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ತಿಳಿಸಿದ್ದಾರೆ.

ಹಿಂದಿನ ದಿನವೇ ದುರಂತ:
ಬ್ಲೂ ಮೂನ್ ಹಿಂದಿನ ದಿನವೇ ವಿಶ್ವದ ಹಲವೆಡೆ ಸಾವು ನೋವು ಸಂಭವಿಸಿದೆ. ತೀವ್ರ ಭೂಕಂಪಕ್ಕೆ ಟರ್ಕಿ, ಗ್ರೀಸ್, ಬಲ್ಗೇರಿಯಾ ತತ್ತರಗೊಂಡಿದ್ದು ನೋಡನೋಡುತ್ತಲೇ ಕಟ್ಟಡಗಳು ಧರೆಗೆ ಬಿದ್ದಿದೆ. 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಮಿನಿ ಸುನಾಮಿಯಿಂದ ಟರ್ಕಿಯ ನಗರಗಳಿಗೆ ನೀರು ನುಗ್ಗಿದೆ. ಗ್ರೀಸ್ ರಾಜಧಾನಿ ಅಥೆನ್ಸ್, ಸಮೋವಾ ದ್ವೀಪ ಸಮೂಹ ಮತ್ತು ಬಲ್ಗೇರಿಯಾದಲ್ಲಿಯೂ ಭೂಮಿ ಕಂಪಿಸಿದ್ದು, ಜನ ಮನೆಗಳಿಂದ ಓಡೋಡಿ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *