ಆಕ್ಸ್‌ಫರ್ಡ್‌ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮವಿಲ್ಲ

Public TV
2 Min Read

– 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ಪ್ರಯೋಗ
– 56 ದಿನಗಳ ಕಾಲ ವೈರಸ್‌ ವಿರುದ್ಧ ಹೋರಾಟ

ಲಂಡನ್‌: ಕೊರೊನಾ ವೈರಸ್‌ನಿಂದ ನಲುಗುತ್ತಿರುವ ವಿಶ್ವಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಲಸಿಕೆ ಸುರಕ್ಷಿತವಾಗಿದೆ.

ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆಯ ಸುರಕ್ಷಿತವಾಗಿದೆ ಎಂದು ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್’‌ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್‌ ಯಶಸ್ವಿಯಾಗಿದ್ದು, ಈ ವೇಳೆ ಲಸಿಕೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ತಿಳಿಸಿದೆ.

ಸ್ವಯಂಸೇವಕರ ಮೇಲೆ ನಡೆದ ಪ್ರಯೋಗದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಲಸಿಕೆ ನೀಡಿದ ಬಳಿಕ ಅವರ ದೇಹದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು(ಆಂಟಿಡಿಬಾಡಿಸ್‌) ಮತ್ತು ಟಿ- ಕೋಶಗಳು ಸೃಷ್ಟಿಯಾಗಿದೆ. ಪ್ರಯೋಗದಲ್ಲಿ 56 ದಿನಗಳ ಕಾಲ ಈ ಪ್ರತಿಕಾಯಗಳು ವೈರಸ್‌ ವಿರುದ್ಧ ಹೋರಾಡಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಂಶೋಧನೆಯ ಪ್ರಮುಖ ಲೇಖಕ ಆಂಡ್ರ್ಯೂ ಪೊಲಾರ್ಡ್ ಪ್ರತಿಕ್ರಿಯಿಸಿ, ಈ ಲಸಿಕೆ ಜನರನ್ನು ಎಷ್ಟು ಕಾಲದವರೆಗೆ ಕೊರೊನಾದಿಂದ ರಕ್ಷಿಸುತ್ತದೆ ಎನ್ನುವುದು ಇನ್ನು ದೃಢಪಟ್ಟಿಲ್ಲ. ಹೀಗಾಗಿ ಮತ್ತಷ್ಟ್ರು ಪ್ರಯೋಗಗಳು ನಡೆಯಬೇಕಿದೆ ಎಂದು ತಿಳಿಸಿದ್ದಾರೆ. ಈ ಲಸಿಕೆ ಬಗ್ಗೆ ಭಾರೀ ವಿಶ್ವಾಸ ಇಟ್ಟುಕೊಂಡಿರುವ ಇಂಗ್ಲೆಂಡ್‌ ಸರ್ಕಾರ 1 ಕೋಟಿ ಡೋಸ್‌ಗಳಿಗೆ ಈಗಾಗಲೇ ಆರ್ಡರ್‌ ಕೂಡ ನೀಡಿದೆ.

ಎಲ್ಲರಿಗಿಂತ ಮೊದಲು ಹೇಗೆ?
ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ತೀವ್ರತೆರನಾದ ಶ್ವಾಸಕೋಶದ ಸಮಸ್ಯೆ ತರಬಲ್ಲ ಸಾರ್ಸ್ (ಸಿವಿಯ‌ ಅಕ್ಯೂಟ್ ರೆಸ್ಪಿರೇಟರಿ ಸಿಂಡೋಮ್) ಹಾಗೂ ಎಂಇಆರ್‌ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡೋಮ್) ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಲ್ಲ ಕೊರೊನಾ ವೈರಸ್‌ ಬಂದಿದೆ. ಹೀಗಾಗಿ ಕೂಡಲೇ ತಂಡ ಕೋವಿಡ್‌ಗೆ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ಬೇರೆಯವರು ಲಸಿಕೆ ಕಂಡು ಹಿಡಿಯುವ ಪ್ರಯೋಗ ನಡೆಸುವುದಕ್ಕೆ ಮುನ್ನವೇ ಇವರು ವೈರಸ್‌ ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವ ಕಾರಣ ವಿಶ್ವದಲ್ಲಿ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಹೈದರಬಾದಿನ ಭಾರತ್‌ ಬಯೋಟೆಕ್‌, ಚೀನಾದ ಸಿನೋವಾಕ್ ಬಯೋಟೆಕ್, ಚೀನಾ ಸರ್ಕಾರಿ ಸ್ವಾಮ್ಯದ ಸಿನೊಫಾರ್ಮ್ ಮತ್ತು ಅಮೆರಿಕಾದ ಬಯೋಟೆಕ್ ಸಂಸ್ಥೆ ಮೊಡೆರ್ನಾ ಸಹ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು ಕ್ಲಿನಿಕಲ್‌ ಪ್ರಯೋಗ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *