ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು- ಪರಿಸರ ಸಚಿವಾಲಯ

Public TV
1 Min Read

ನವದೆಹಲಿ: ಕೇರಳದಲ್ಲಿ ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಪ್ರಾಥಮಿಕ ವರದಿಗಳ ಪ್ರಕಾರ 15 ವರ್ಷದ ಆನೆ ಪಟಾಕಿ ತುಂಬಿದ ಪೈನಾಪಲ್ ತಿಂದ ಪರಿಣಾಮ ಮೃತಪಟ್ಟಿದೆ ಎನ್ನಲಾಗಿದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಪೈನಾಪಲ್ ಅಲ್ಲ, ತೆಂಗಿನಕಾಯಿ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಆನೆಗೆ ಉಂಟಾಗಿದ್ದ ಗಾಯಗಳು ಕನಿಷ್ಠ ಎರಡು ವಾರಗಳಷ್ಟು ಹಳೆಯದ್ದಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

ಕಾಡು ಹಂದಿಗಳು ತೋಟ, ಗದ್ದೆಗಳಿಗೆ ಪ್ರವೇಶಿಸದಂತೆ ಹಾಗೂ ಹಿಮ್ಮೆಟ್ಟಿಸಲು ಸ್ಥಳೀಯರು ಕಾನೂನುಬಾಹಿರವಾಗಿ ಸ್ಫೋಟಕ ತುಂಬಿದ ಹಣ್ಣುಗಳನ್ನು ಇಡುತ್ತಾರೆ. ಆನೆಯ ಸಾವಿಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ವದಂತಿ ಮತ್ತು ಸುಳ್ಳ ಸುದ್ದಿಗಳು ಪ್ರಸಾರವಾಗುತ್ತಿವೆ. ಅವುಗಳನ್ನು ನಂಬಬೇಡಿ ಎಂದು ಪರಿಸರ ಸಚಿವ ಬಾಬುಲ್ ಸುಪ್ರಿಯೋ ಜನರನ್ನು ಕೋರಿದ್ದಾರೆ. ಆನೆ ಸಾವಿನ ಪ್ರಕರಣವನ್ನು ಕೇರಳ ಸರ್ಕಾರ ಮತ್ತು ಸಚಿವಾಲಯದ ಎಲ್ಲಾ ಇಲಾಖೆಗಳು ಪಕ್ಷಪಾತವಿಲ್ಲದೆ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *