– 20 ರಿಂದ 25 ನಿಮಿಷದ ನ್ಯೂಡಿಟಿಯ ಶಾರ್ಟ್ ಫಿಲ್ಮ್ ನಿರ್ಮಾಣ
ಮುಂಬೈ: ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದು, ಒಂದೊಂದೇ ಸ್ಫೋಟಕ ವಿಷಯಗಳು ಹೊರ ಬರುತ್ತಿವೆ. ಇದೀಗ ರಾಜ್ ಕುಂದ್ರಾ ಬಳಿಯಲ್ಲಿ ಕೆಲಸ ಮಾಡಿದ್ದ ಮಾಜಿ ಉದ್ಯೋಗಿ, ಕಂಟೆಂಟ್ ಕ್ರಿಯೇಟರ್ ತನ್ವೀರ್ ಹಶ್ಮಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಿರ್ಮಾಣ ಮಾಡಿದ್ದು ಆಶ್ಲೀಲ (ಪೋರ್ನ್) ಸಿನಿಮಾ ಅಲ್ಲ, ಅದು ಸಾಫ್ಟ್ ಪೋರ್ನ್ ಎಂದು ಹೇಳಿದ್ದಾರೆ.
ಪೋರ್ನ್ ಸಿನಿಮಾ ಆರೋಪದಡಿಯಲ್ಲಿ ಪೊಲೀಸರು ಹಲವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದ ಹಲವರಿಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ತನ್ವೀರ್ ಹಶ್ಮಿ ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ತನ್ವೀರ್ ಹಶ್ಮಿ ಹೇಳಿದ್ದೇನು?
ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್ ಪೊಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಜ್ ಕುಂದ್ರಾ ಪರಿಚಯ ಆಗಿದ್ದು ಯಾವಾಗ? ಇಬ್ಬರ ಮಧ್ಯೆ ವ್ಯವಹಾರ ಹೇಗಿತ್ತು? ಸಿನಿಮಾ ನಿರ್ಮಾಣದ ಕುರಿತ ಕೇಳಿದರು. ಆದ್ರೆ ನಾನು ಒಮ್ಮೆಯೂ ರಾಜ್ ಕುಂದ್ರಾ ಅವರನ್ನ ಮುಖಾಮುಖಿಯಾಗಿ ಭೇಟಿಯಾಗಿಲ್ಲ ಎಂದು ಹೇಳಿದ್ದೇನೆ.
ಅದು ಸಾಫ್ಟ್ ಪೋರ್ನ್:
ನಾನು ರಾಜ್ ಕುಂದ್ರಾ ಒಡೆತನದ ಆ್ಯಪ್ ಗೆ ಸಂಬಂಧಿಸಿದ ಕಂಟೆಂಟ್ ಸಿದ್ಧಪಡಿಸುವ ಕೆಲಸ ಮಾಡಿದ್ದೇನೆ. ಆದ್ರೆ ನಾನು ರಾಜ್ ಕುಂದ್ರಾ ಕಂಪನಿಯ ಉದ್ಯೋಗಿ ಅಲ್ಲ. ನಾವು ಸುಮಾರು 20 ರಿಂದ 25 ನಿಮಿಷದ ಅವಧಿಯ ಕಿರುಚಿತ್ರ ಮಾಡಿದ್ದೇವೆ. ಆದ್ರೆ ಅದ್ಯಾವುದು ಅಶ್ಲೀಲ ಚಿತ್ರಗಳಲ್ಲ. ಆ ಚಿತ್ರಗಳಿಗೆ ನಾವು ಸಾಫ್ಟ್ ಪೋರ್ನ್ ಎಂದು ಕರೆಯತ್ತೇವೆ ಅಂತ ಹೇಳಿದ್ದಾರೆ.
ನನ್ನ ಪ್ರಕರಣ ನ್ಯಾಯಾಲಯದಲ್ಲಿದ್ದು, ಕಾನೂನು ಹೋರಾಟ ನಡೆಸಿದ್ದೇನೆ. ಇನ್ನು ಯಾರ ಕೆಲಸವನ್ನ ಒಳ್ಳೆಯದ್ದು, ಕೆಟ್ಟದು ಎಂದು ಹೇಳಲಾರೆ. ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ. ಇದೇ ರೀತಿಯ ಬೋಲ್ಡ್ ಕಂಟೆಂಟ್ ಸಿದ್ಧಪಡಿಸುವ ಹಲವು ಪ್ಲಾಟ್‍ಫಾರಂಗಳಿದ್ದು, ಅವುಗಳ ಮೇಲೆ ಏಕೆ ಕ್ರಮ ಜರುಗಿಸಿಲ್ಲ ಎಂದು ತನ್ವೀರ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಪತಿ ಕುಂದ್ರಾ ಪೋರ್ನ್ ಫಿಲ್ಮ್ ಕೇಸ್- ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ
ಪತಿ ಬಂಧನದ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದೇನು?:
ಅಶ್ಲೀಲ ಸಿನಿಮಾ ಚಿತ್ರೀಕರಣದ ವಿಚಾರದಲ್ಲಿ ತನ್ನ ಸಹಭಾಗಿತ್ವ ಏನೂ ಇಲ್ಲ ರಾಜ್ ಕುಂದ್ರಾ ಅವರ ಹಾಟ್ ಶಾಟ್ಸ್ ಆಪ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ ಎಂದು ಅವರು ವಾದಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.