ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಆರು ಮಂದಿ ಕೊರೊನಾ ವಾರಿಯರ್ಸ್ ಅಮಾನತು

Public TV
1 Min Read

ಶಿವಮೊಗ್ಗ: ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಮಗೆ ನೀಡಿರುವ ವಸತಿ ವ್ಯವಸ್ಥೆ ಸರಿಯಿಲ್ಲ ಹಾಗೂ ಕಳಪೆ ಊಟ ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ, ವಾಟ್ಸಪ್ ಗ್ರೂಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಇದೀಗ ಈ ಆರು ಮಂದಿಯನ್ನು ಸಿಮ್ಸ್ ನಿರ್ದೇಶಕ ಡಾ. ಗುರುಪಾದಸ್ವಾಮಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಖಾಯಂ ಶುಶ್ರೂಷಕಿಯಾದ ಚೇತನಾಕುಮಾರಿ, ಹೊರಗುತ್ತಿಗೆ ಶುಶ್ರೂಷಕಿ ಭುವನೇಶ್ವರಿ, ಹೊರಗುತ್ತಿಗೆ ಸಿಬ್ಬಂದಿ ಅಟೆಂಡರ್ ಅರುಣ್ ಕುಮಾರ್, ಪದ್ಮರಾಜ್, ಸ್ವೀಪರ್ ಅನಿತಾ, ಲಕ್ಷ್ಮಿದೇವಿ ಅವರನ್ನು ಅಮಾನತು ಗೊಳಿಸಲಾಗಿದೆ.

ಶಿವಮೊಗ್ಗದಲ್ಲಿ ಕಳೆದ ಎರಡು ದಿನದ ಹಿಂದೆ ಅಹಮದಾಬಾದ್‍ನಿಂದ ವಾಪಸ್ ಬಂದಿದ್ದ 8 ಮಂದಿ ತಬ್ಲಿಘಿಗಳಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಹೀಗಾಗಿ ಸೋಂಕಿತರನ್ನು ಮೆಗ್ಗಾನ್ ಭೋಧನಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇವರಿಗೆ ಚಿಕಿತ್ಸೆ ನೀಡಲು ಹಲವು ಸಿಬ್ಬಂದಿಯನ್ನು ಮೂರು ಪಾಳಿಯಲ್ಲಿ ನೇಮಿಸಲಾಗಿದೆ. ಅಲ್ಲದೇ ಕೋವಿಡ್-19 ಆಸ್ಪತ್ರೆಯಲ್ಲಿ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡುವವರು ಮನೆಗೆ ಹೋಗುವಂತಿಲ್ಲ. ಆ ಎಲ್ಲಾ ಸಿಬ್ಬಂದಿಗೆ ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಿದೆ. ಆದರೆ ಶುಶ್ರೂಷಕರು ಸೇರಿದಂತೆ ಇತರೆ ಸಿಬ್ಬಂದಿಗೆ ಶುಶ್ರೂಷಕರ ತರಬೇತಿ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಿದ್ದಾರೆ.

ಆದರೆ ಈ ವಸತಿ ನಿಲಯದಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಇಲ್ಲ. ಊಟದ ವ್ಯವಸ್ಥೆ ಸರಿಯಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದರು. ಅಲ್ಲದೇ ಇದರ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಇದೀಗ ಕೊರೊನಾ ವಾರಿಯರ್ಸ್‍ಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿರುವ ಆರೋಗ್ಯ ಇಲಾಖೆ ನೌಕರರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *