ಅವಳಿ ನಗರಗಳಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ 10 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ್

Public TV
1 Min Read

– ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ

ಹುಬ್ಬಳ್ಳಿ: ನಗರದಲ್ಲಿ ಏಕಸ್, ಯಫ್ಲೆಕ್ಸ್, ರಾಜೇಶ್ ಎಕ್ಸೋ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ. ಇದರಿಂದ ಸ್ಥಳೀಯವಾಗಿ 10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಇದರಿಂದ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗ ಅರಸಿ ಬೆಂಗಳೂರು, ಪೂಣೆ, ಮುಂಬೈಗಳಿಗೆ ವಲಸೆ ಹೋಗುವುದು ತಪ್ಪಲಿದೆ ಸ್ಥಳೀಯವಾಗಿ ವಿಪುಲ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆದ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಮಹಿಳಾ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದರು. ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳಲ್ಲಿನ ಬಂಡವಾಳ ಹೂಡಿಕೆಯನ್ನು ರಾಜ್ಯದ ಎರೆಡು ಹಾಗೂ ಮೂರನೇ ಹಂತದ ನಗರಗಳಲ್ಲಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.

ಸರ್ಕಾರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ವಿತರಣೆ ಮಾಡುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ಪರೀಕ್ಷೆಗಳಿಗೆ ಹೆಚ್ಚಿನ ಜ್ಞಾನ ಪಡೆಯಲು ಅವಕಾಶವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೆರಿಟ್‍ಗೆ ಹೆಚ್ಚಿನ ಅವಕಾಶವಿದೆ. ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳದೆ ಅಧ್ಯಯನ ನಡೆಸಿ. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ವಿದ್ಯಾಪೀಠದ ಪ್ರಾಚಾರ್ಯೆ ಗೀತಾ ಎಂ. ಅವರ ಮನವಿ ಸ್ಪಂದಿಸಿ, ವಿವಿಧ ಕಂಪನಿಗಳ ಸಿ.ಎಸ್.ಆರ್ ನಿಧಿಯಡಿ ಕಾಲೇಜಿಗೆ ಅಗತ್ಯ ಇರುವ ಕಂಪ್ಯೂಟರ್ ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ನ 440 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲಾಯಿತು. ಕಾಲೇಜಿನ ಪ್ರಾಚಾರ್ಯ ಆನಂದ ಖಾನಾಪುರ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *