ಅರ್ಹತೆ ಇರೋ ಎಲ್ಲಾ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಈಶ್ವರಪ್ಪ

Public TV
2 Min Read

ಶಿವಮೊಗ್ಗ: ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳನ್ನು ಎಸ್‍ಟಿ ವರ್ಗಕ್ಕೆ ಸೇರಿಸಬೇಕು ಎಂದು ಅನೇಕ ಸಮಾಜದವರು ಬೇಡಿಕೆ ಇಟ್ಟಿದ್ದಾರೆ. ಅನೇಕ ಸಮಾಜಗಳಿಗೆ ಎಸ್‍ಟಿಗೆ ಸೇರುವ ಅರ್ಹತೆ ಸಹ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ಎಲ್ಲಾ ಹಿಂದುಳಿದ ವರ್ಗ ಯಾರು, ಯಾರಿಗೆ ಎಸ್‍ಟಿಗೆ ಸೇರಲು ಅರ್ಹತೆ ಇದೆಯೋ, ಆ ಎಲ್ಲಾ ಅರ್ಹತೆ ಇರುವ ಸಮಾಜವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲವಿದೆ ಎಂದರು.

ಈಗಾಗಲೇ ಕುರುಬ ಸಮುದಾಯದ ಜೊತೆ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲರ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚಿಸಲು ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರ ಜೊತೆ ಸಭೆ ನಡೆದಿದೆ. ಅಲ್ಲದೇ ಈ ಬಗ್ಗೆ ಮತ್ತೆ ಚರ್ಚಿಸಲು ನಮ್ಮ ಮನೆಯಲ್ಲಿ ಇದೇ ಭಾನುವಾರ ಎಲ್ಲಾ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರು ಸಭೆ ನಡೆಯಲಿದೆ. ಅಲ್ಲದೇ ಕುರುಬ ಸಮಾಜದ ಸ್ವಾಮೀಜಿಯವರು ನನ್ನ ಮನೆಗೆ ಭೇಟಿ ನೀಡಿ ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸುವ ಹೋರಾಟದ ನೇತೃತ್ವವನ್ನು ನೀವೆ ವಹಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದರು.

ಎಸ್‍ಟಿಗೆ ಕುರುಬ ಸಮಾಜ ಸೇರಿಸಬೇಕು ಎಂಬ ಹೋರಾಟ ಮುಂದುವರಿಯುತ್ತದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಸಹ ಇದೆ. ಸದ್ಯದ ಮೀಸಲಾತಿ ಪ್ರಕಾರ ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ಮಾಡಲು ಬರುವುದಿಲ್ಲ. ಸದ್ಯ ವಾಲ್ಮೀಕಿ ಸಮಾಜಕ್ಕೆ 3% ಮೀಸಲಾತಿ ಇದೆ. ಈ 3% ಮೀಸಲಾತಿಯನ್ನು 7% ಗೆ ಹೆಚ್ಚಿಸಬೇಕು ಎಂಬ ಅವರ ನ್ಯಾಯಬದ್ಧವಾದ ಬೇಡಿಕೆ ಇದೆ. ಈಗಾಗಿಯೇ ಸರ್ಕಾರ ನಾಗಮೋಹನ್ ದಾಸ್ ವರದಿಯ ನಿರೀಕ್ಷೆಯಲ್ಲಿದೆ. ಆ ವರದಿ ಬಂದ ನಂತರ ಅದರ ಪ್ರಕಾರ ಎಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೋ ಅಷ್ಟನ್ನು ಖಂಡಿತಾ ಮಾಡುತ್ತೇವೆ ಎಂದರು.

ಕುರುಬ ಸಮಾಜ, ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲ ಸಮಾಜ ಯಾವುದೇ ಸಮಾಜ ಆಗಲಿ ಎಸ್‍ಟಿ ಗೆ ಸೇರಿಸಲು ಅವರು ಒಬಿಸಿಯಲ್ಲಿ ಎಷ್ಟು ಮೀಸಲಾತಿ ಪಡೆದಿದ್ದಾರೋ ಅದರ ಸಮೇತ ಅವರು ಎಸ್‍ಟಿಗೆ ಬರಬೇಕು. ಈಗ ಇರುವಂತಹ ಎಸ್‍ಟಿ ಸಮಾಜಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ. ಜೊತೆಗೆ ಈ ಎಲ್ಲಾ ಸಮಾಜಗಳು ಎಸ್‍ಟಿ ಸೇರ್ಪಡೆಯಿಂದ ಯಾವುದೇ ರೀತಿ ತೊಂದರೆಯೂ ಆಗುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *