ಅರೆ ದಡ್ಡ ಜಮೀರ್‌ಗೆ ನಟನೆಯ ಚಾಕಚಕ್ಯತೆ ಇದೆ: ರೇಣುಕಾಚಾರ್ಯ

Public TV
2 Min Read

– ಜಮೀರ್ ಶಾಸಕರಾಗಲು ನಾಲಾಯಕ್
– ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ

ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಬುದ್ಧಿವಂತನಲ್ಲ, ಅರೆ ದಡ್ಡ. ಆತನಿಗೆ ನಟನೆಯ ಚಾಕಚಕ್ಯತೆ ಇದ್ದು, ಆತ ನಂಬರ್ ಒನ್ ದೇಶದ್ರೋಹಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮೀರ್‍ಗೆ ಭಾರತೀಯ ಸಂಸ್ಕೃತಿ ಇಲ್ಲ. ಪಾದರಾಯನಪುರ ಪುಂಡರ ರಕ್ಷಣೆಗೆ ಜಮೀರ್ ನಿಂತಿದ್ದಾರೆ. ಪಾದರಾಯನಪುರ ಪುಂಡರ ರಕ್ಷಣೆ ದೇಶದ್ರೋಹದ ಕೆಲಸ. ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಅಂಥವರಿಗೆ ಬೆಂಬಲಿಸುವುದು ಸರಿಯಲ್ಲ. ಜಮೀರ್ ಶಾಸಕರಾಗಲು ನಾಲಾಯಕ್. ಹೀಗಾಗಿ ಶಾಸಕ ಸ್ಥಾನವನ್ನು ವಜಾ ಮಾಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

ಜಮೀರ್ ಬುದ್ಧಿವಂತನಲ್ಲ, ಅರೆ ದಡ್ಡ. ಜಮೀರ್‍ಗೆ ನಟನೆಯ ಚಾಕಚಕ್ಯತೆ ಇದೆ. ಜಮೀರ್ ನಂಬರ್ ಒನ್ ದೇಶದ್ರೋಹಿ. ಮನಿ, ಮ್ಯಾನ್ ಪವರ್ ಇದೆ ಅಂತ ಜಮೀರ್ ಅನ್ಕೊಂಡಿರಬಹುದು. ಮುಂದಿನ ಚುನಾವಣೆಯಲ್ಲಿ ಜನ ಜಮೀರ್‍ಗೆ ತಕ್ಕ ಪಾಠ ಕಲಿಸ್ತಾರೆ. ಜಮೀರ್ ಅಹಮದ್ 420. ಗುಜರಿ ವ್ಯಾಪಾರ ಮಾಡಿ ರಾಜಕೀಯಕ್ಕೆ ಬಂದು ಜಮೀರ್ ನಟನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅದು ಬಿಟ್ಟು ಪುಂಡರಿಗೆ ರಕ್ಷಣೆಯಾಗಿ ನಿಲ್ಲೋದು ಸರಿಯಲ್ಲ ಎಂದು ಗರಂ ಆದರು.

ಇದೇ ವೇಳೆ ಬಿಜೆಪಿಯಲ್ಲಿ ಬಂಡಾಯ ಸಭೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಆನೆಗೆ ಇರೋ ತೂಕ ಆನೆಗೆ ಇದ್ದೇ ಇರುತ್ತೆ. ಯಡಿಯೂರಪ್ಪ ಸಹ ಆನೆಯಂತೆ, ಅವರಿಗೆ ಇರೋ ಮೌಲ್ಯ ಇದ್ದೇ ಇರುತ್ತೆ. ಯಾರೋ ಕೆಲವರು ಯಡಿಯೂರಪ್ಪ ವಿರುದ್ಧ ಪ್ಲಾನ್ ಮಾಡಿ ಸಭೆ ಮಾಡಿದ್ರು. ನಿರಾಣಿ ಆ ಸಭೆಗೆ ಹೋಗಲೇ ಇಲ್ಲ. ನಿರಾಣಿ ವಿರುದ್ಧವೂ ಷಡ್ಯಂತ್ರ ನಡೀತು. ಯಾರೋ ಒಬ್ಬಿಬ್ರು ಈ ರೀತಿ ಮಾಡಿದ್ರೆ ಅವರೇ ವಿಲನ್ ಆಗ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರು ಸಿಎಂ ಆಗಿ ಪೂರ್ಣಾವಧಿ ಮುಗಿಸ್ತಾರೆ ಎಂದರು.

ಬಂಡಾಯ ಸಭೆಯ ಹಿಂದೆ ಇರೋರ ವಿರುದ್ಧ ಪಕ್ಷ ಕ್ರಮ ತಗೊಳ್ಳುತ್ತೆ. ಈಗಾಗಲೇ ಪಕ್ಷದ ಅಧ್ಯಕ್ಷರು ಎಚ್ಚರಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ವಿರುದ್ಧ ಅವರು ದೆಹಲಿಗೆ ಹೋದ್ರೆ, ನಾವೂ ಅವರ ಪರವಾಗಿ ದೆಹಲಿಗೆ ಹೋಗ್ತೇವೆ. ವಿಜಯೇಂದ್ರರ ವಿರುದ್ಧ ಆರೋಪ ನಿರಾಧಾರ. ವಿನಾಕಾರಣ ವಿಜಯೇಂದ್ರರ ವಿರುದ್ಧ ಆರೋಪ ಮಾಡಲಾಗುತ್ತಿದೆ. ವಿಜಯೇಂದ್ರರ ಹಸ್ತಕ್ಷೇಪವನ್ನು ಸಾಬೀತು ಪಡಿಸಲಿ ಎಂದು ಸವಾಲೆಸೆದರು.

ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಹಗಲು ಕನಸು ಕಾಣೋದು ಬೇಡ. ಬಿಜೆಪಿಯ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತೇವೆ. ನಮ್ಮ ಪಕ್ಷ ಸಶಕ್ತವಾಗಿದೆ, ಪಕ್ಷದಲ್ಲಿ ಒಗ್ಗಟ್ಟಿದೆ. ಭಿನ್ನಮತ, ಬಂಡಾಯ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *