ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿಗಳು ಪಲ್ಟಿ- ಮೀನುಗಾರರ ರಕ್ಷಣೆ

Public TV
1 Min Read

ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಂದರು ಬಳಿಯ ಅಳಿವೆ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

ಅಬ್ಬರದ ಮಳೆಯಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧವಿದ್ದರೂ, ಪಾತಿದೋಣಿ ಮೂಲಕ ಮೀನುಗಾರಿಕೆಗೆ ಐದಕ್ಕೂ ಹೆಚ್ಚು ದೋಣಿಗಳು ತೆರಳಿದ್ದವು. ಭಟ್ಕಳದಲ್ಲಿ ಭಾರೀ ಗಾಳಿ ಸಹಿತ ಅಬ್ಬರದ ಮಳೆಯಾಗಿದ್ದರಿಂದ ಮೀನುಗಾರರು ಅಲೆಯ ರಭಸಕ್ಕೆ ವಾಪಾಸ್ ಬರಲಾಗದೆ ತೊಂದರೆ ಗೊಳಗಾಗಿದ್ದರು. ಇನ್ನು ಹಲವು ಪಾತಿ ದೋಣಿಗಳು ಅಲೆಯ ಹೊಡೆತಕ್ಕೆ ಪಲ್ಟಿಯಾಗಿವೆ. ತಕ್ಷಣ ದಡದಲ್ಲಿದ್ದ ಸ್ಥಳೀಯ ಮೀನುಗಾರರು ಇದನ್ನು ಗಮನಿಸಿ ಗಿಲ್ನೆಟ್ ದೋಣಿ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ರಕ್ಷಣೆಗೊಳಗಾದ ಮೀನುಗಾರರು ಭಟ್ಕಳದ ಮುಂಡಳ್ಳಿ, ಬೆಳ್ನಿ ಭಾಗದವರಾಗಿದ್ದಾರೆ.

ರಕ್ಷಣೆಗೆ ಬಾರದ ಕರಾವಳಿ ಕಾವಲು ಪಡೆ!
ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಪೊಲಿಸರು ಇದ್ದಾರೆ. ಮೀನುಗಾರರಿಗೆ ತೊಂದರೆಯಾದಾಗ ಇವರನ್ನು ರಕ್ಷಣೆ ಮಾಡುವುದು ಕರಾವಳಿ ಕಾವಲುಪಡೆಯ ಕತ್ರ್ಯವ್ಯ. ಆದರೆ ಈ ವರೆಗೆ ಕಡಲಲ್ಲಿ ಏನಾದರು ತೊಂದರೆಗಳಾದಾಗ ರಕ್ಷಣೆ ಕೋರಿದರೂ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ಸ್ಥಳೀಯ ಮೀನುಗಾರರ ಆಕ್ರೋಶವಾಗಿದೆ. ಮೀನುಗಾರರಿಗೆ ಸಮುದ್ರದಲ್ಲಿ ಏನೇ ಆದರೂ ಮೀನುಗಾರರೇ ರಕ್ಷಣೆ ಮಾಡಿಕೊಳ್ಳಬೇಕಾದ ದೌರ್ಭಾಗ್ಯ ಇಲ್ಲಿನವರದ್ದಾಗಿದೆ.

ಮೀನುಗಾರಿಕೆಗೆ ಇಲಾಖೆ ನಿರ್ಬಂಧ ವಿಧಿಸಿದೆ. ಆದರೂ ಸಂಪ್ರದಾಯಿಕ ಮೀನುಗಾರರು ಸಮುದ್ರ ಅಬ್ಬರದ ನಡುವೆ ದೋಣಿಗಳನ್ನು ಸಮುದ್ರದಲ್ಲಿ ಮೀನುಗಾರಿಕೆಗೆ ಉಪಯೋಗಿಸುತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಾವಳಿ ಕಾವಲುಪಡೆ ಎಚ್ಚರಿಕೆ ನೀಡುವ ಅಥವಾ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಮೀನುಗಾರರು ದುರಂತಕ್ಕೊಳಗಾಗುತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *