ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

By
2 Min Read

– ಕರ್ನಾಟಕದಲ್ಲಿ 95 ಲಕ್ಷ, ದೇಶದಲ್ಲಿ 12 ಕೋಟಿ ಮನೆ ತಲುಪಿದ ರಾಮ ಅಭಿಯಾನ
– ಶೇ.80 ರಷ್ಟು ಮನೆಗಳನ್ನು ತಲುಪಿದ ಅಭಿಯಾನ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ನಡೆದ ಅಭಿಯಾನದಲ್ಲಿ ಕರ್ನಾಟಕದ 95 ಲಕ್ಷ ಮನೆಗಳನ್ನು ತಲುಪಲಾಗಿದ್ದು, ಕರ್ನಾಟಕದಲ್ಲಿ ಸುಮಾರು 200 ಕೋಟಿ ರೂ. ಸಂಗ್ರಹವಾಗಿದೆ.

ಜನವರಿ-ಫೆಬ್ರವರಿಯಲ್ಲಿ 45 ದಿನ ನಡೆದ ಅಭಿಯಾನದಲ್ಲಿ ಗುರಿ ಇರಿಸಿಕೊಂಡಿದ್ದ ಶೇಕಡಾ 80 ಮನೆಗಳನ್ನು ತಲುಪಲಾಗಿದೆ. ಕರ್ನಾಟಕದಲ್ಲಿ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಲು 1,250 ಸ್ವಾಮೀಜಿಗಳು ಭಾಗವಹಿಸಿದ್ದರು ಎಂದು ಅಭಿಯಾನದ ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ಸಮಾರೋಪ ಸಮಾರಂಭ ಸದಾಶಿವ ನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ  ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು, ಶ್ರೀರಾಮ ಮಂದಿರ ನಿರ್ಮಾಣ ರಾಜ್ಯ ಸಮಿತಿಯ ಸದಸ್ಯರು ಒಳಗೊಂಡಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ 5.5 ಲಕ್ಷ ಗ್ರಾಮ, ನಗರ ಪ್ರದೇಶಗಳಲ್ಲಿ 12 ಕೋಟಿ ಮನೆಗಳನ್ನು ತಲುಪಲಾಗಿದೆ. ಶೇಕಡಾ ನೂರು ಕ್ರೈಸ್ತರಿರುವ ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಎಲ್ಲರೂ ಶ್ರೀರಾಮನ ಕಾರ್ಯಕ್ಕೆ ಸ್ಪಂದನೆ ನೀಡಿದ್ದಾರೆ‌ ಎಂದು ನಾ. ತಿಪ್ಪೇಸ್ವಾಮಿ ಹೇಳಿದರು.

ಪೇಜಾವರ ಶ್ರೀಗಳು ಮಾತನಾಡಿ, ರಾಮ ಮಂದಿರ ನಿರ್ಮಾಣ ದೊಡ್ಡ ಕೆಲಸವಲ್ಲ ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಕೆಲಸ ಎಂದರು. ಮತ್ತು ಮಕ್ಕಳಿಗೆ ಸಂಸ್ಕೃತಿ,ಸಂಸ್ಕಾರ ಕೊಟ್ಟರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಮತ್ತು ಯಾವುದೇ ಮತೀಯ ಶಕ್ತಿಗಳು ತೊಂದರೆ ಕೊಡಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಬಂದ ಪ್ರತಿಕ್ರಿಯೆಯಿಂದ ರಾಮ ಮಂದಿರದ ಮತ್ತು ರಾಮರಾಜ್ಯದ ಬಗ್ಗೆ ಜನಗಳಿಗಿರುವ ಮನೋಭಿಲಾಷೆ ತಿಳಿಸುತ್ತದೆ ಎಂದರು.

ದೇಶದ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಮ್ಯೂನಿಸ್ಟರ ಮಾತು ಕಸ ಎಂದು ಜನರೇ ನಿರೂಪಿಸಿದ್ದಾರೆ ಎಂದು ಕನ್ಹೇರಿಯ ಅದೃಷ ಕಾಡಸಿದ್ದೇಶ್ಚರ ಸ್ವಾಮೀಜಿ ಹೇಳಿದರು.  ತಮಿಳುನಾಡಿನಲ್ಲಿ ರಾಮನ ವಿರೋಧಿಗಳಿದ್ದಾರೆ ಎಂಬ ಭಾವನೆ ಮೂಡಿಸಿದ್ದರು. ಆದರೆ ಅಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದರು. ಒಂದು ಮನೆಯ ಸಂಗ್ರಹ ಮುಗಿಸುವ ವೇಳೆಗೆ ಇನ್ನೊಂದು ಮನೆಯಲ್ಲಿ ದೇಣಿಗೆ ನೀಡಲು ಸಿದ್ಧರಾಗಿರುತ್ತಿದ್ದರು. ಚಿಲ್ಲರೆ ಭಾಷಣ ಮಾಡಿಕೊಂಡು ಸಮಾಜ ಒಡೆಯುವವರಿಗೆ ಜನರು ಉತ್ತರ ನೀಡಿದ್ದಾರೆ. ಮುಂದೆ ಕಾಶಿ ಹಾಗೂ ಮಥುರಾದಲ್ಲಿ ಮಂದಿರ ಕಟ್ಟುವ ಕಾರ್ಯ ಸದ್ಯದಲ್ಲೇ ಲಭಿಸಲಿದೆ ಎಂದು ಈ ವೇಳೆ ಹೇಳಿದರು.

ಕಾರ್ಯಕ್ರಮದಲ್ಲಿ ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ್ ದಾಸ್ ಜಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ವಿಜಯನಗರ ಮಠದ ಸೋಮನಾಥ ಸ್ವಾಮೀಜಿ ,ಕನ್ಹೆರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಕವಲಗುಡ್ಡ ಅಮಾರೇಶ್ವರ ಮಹಾರಾಜರು, ಸೇವಾಲಾಲ್ ಗುರುಪೀಠದ ಶ್ರೀಬಳಿರಾಮ್ ಮಹರಾಜ್ ಪಾಲ್ಗೊಂಡು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ರಾಮಮಂದಿರ ಮಾದರಿಯನ್ನು ಪ್ರದರ್ಶಿಸಲಾಯಿತು. ಅಭಿಯಾನಕ್ಕೆ ಸಹಕಾರ ನೀಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ತಿಪ್ಪೇಸ್ವಾಮಿ ಅವರು ಅಭಿನಂದನೆಗಳನ್ನು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *