ಅಮೆರಿಕದಲ್ಲಿ ಜೋ ಬೈಡೆನ್‌ ಯುಗಾರಂಭ

Public TV
2 Min Read

– ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಪ್ರಮಾಣ ವಚನ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ 76 ವರ್ಷದ ಜೋ ಬೈಡೆನ್ ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಆಗಿದ್ದರೆ 49ನೇ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ (58) ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ.

127 ವರ್ಷದಷ್ಟು ಹಳೆಯ ಬೈಬಲ್ ಮೇಲೆ ಬೈಡೆನ್ ಪ್ರಮಾಣ ವಚನ ನಡೆದಿದ್ದು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ ಪಶ್ಚಿಮ ಭಾಗದಲ್ಲಿ ಕಾರ್ಯಕ್ರಮ ನಡೆಯಿತು. 1937ರಿಂದಲೂ ಜ.20ಕ್ಕೆ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಈ ಮೊದಲು ಮಾರ್ಚ್ 4ಕ್ಕೆ ನಡೆಯುತ್ತಿತ್ತು.

ಅಮೆರಿಕದವರೇ ಆಗಿರುವ ದಕ್ಷಿಣ ಆಫ್ರಿಕಾದ ಕಪ್ಪುವರ್ಣೀಯರು ಮತ್ತು ದಕ್ಷಿಣ ಏಷ್ಯಾದ ಮೂಲದವರೇ ಹೆಚ್ಚಾಗಿ ಡೆಮಾಕ್ರೆಟಿಕ್ ಪಕ್ಷಕ್ಕೆ ವೋಟ್ ಮಾಡಿದ್ದು, ಅವರಿಗೀಗ ಹಬ್ಬದಂತಾಗಿದೆ. ಲಿಂಕನ್ ಸ್ಮಾರಕದ ಬಳಿ 400 ಕ್ಯಾಂಡಲ್ ಹಚ್ಚಿರುವ ಬೈಡೆನ್, ಕೊರೋನಾ ಬಲಿಯಾದ 4 ಲಕ್ಷ ಜನರಿಗೆ ನಮನ ಸಲ್ಲಿಸಿದ್ದಾರೆ.

ಬಿಗಿ ಭದ್ರತೆ:
ಹೊಸ ಅಧ್ಯಕ್ಷರ ಪ್ರಮಾಣ ವಚನಕ್ಕೆ ಸಮಾರಂಭಕ್ಕೆ ವಾಷಿಂಗ್ಟನ್ ಡಿಸಿಯಲ್ಲಿ ಲಾಕ್‍ಡೌನ್ ವಿಧಿಸಲಾಗಿದೆ. ಹಿಂದೆಂದೂ ಕಂಡಿರದಷ್ಟು ಭದ್ರತೆ, ಯುದ್ಧ ಟ್ಯಾಂಕ್‍ಗಳನ್ನು ಕೂಡ ನಿಯೋಜಿಸಲಾಗಿದೆ. ಕೆಲವು ಕಡೆ ಕಾಂಕ್ರಿಟ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಅಮೆರಿಕದ ಸಂಸತ್ ಕ್ಯಾಪಿಟೊಲ್ ಸುತ್ತ ಬೇಲಿ ಎಳೆಯಲಾಗಿದೆ. ಶ್ವೇತ ಭವನ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸ್ತಿದೆ.

ಅಧ್ಯಕ್ಷರ ಪ್ರಮಾಣ ವಚನ ಸಮಾರಂಭಕ್ಕೆ 2 ಲಕ್ಷ ಮಂದಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್‌ 19 ಕಾರಣದಿಂದ ಟಿಕೆಟ್ ಮಾರಾಟ ಮಾಡಿಲ್ಲ. ಲೈವ್‌ ವಿಡಿಯೋ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.

ಟ್ರಂಪ್‌ ಗೈರು:
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಟ್ರಂಪ್‌ ಹಾಜರಾಗಬೇಕಿತ್ತು. ಆದರೆ ಇಂದು ಶ್ವೇತ ಭವನ ಖಾಲಿ ಮಾಡಿದ ಟ್ರಂಪ್‌ ಫ್ಲೋರಿಡಾಗೆ ಹೊರಟಿದ್ದಾರೆ. ವಿದಾಯ ಭಾಷಣದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಮತ್ತೊಂದು ರೂಪದಲ್ಲಿ ಮರಳಿ ಬರುತ್ತೇನೆ. ನೂತನ ಆಡಳಿತಕ್ಕೆ ಶುಭವಾಗಲಿ. ದೇಶವನ್ನು ಸುರಕ್ಷಿತ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವ ಯಶಸ್ವಿ ಆಡಳಿತ ನೀಡಲಿ ಎಂದು ಶುಭ ಹಾರೈಸಿದರು.

ಹರಿದು ಹಂಚಿ ಹೋಗಿರೋ ರಾಷ್ಟ್ರದ ಮೌಲ್ಯಗಳನ್ನು ಅಮೆರಿಕನ್ನರು ಒಟ್ಟುಗೂಡಿಸಬೇಕು. ಭಿನ್ನಾಭಿಪ್ರಾಯ, ದ್ವೇಷ ಮೀರಿ, ಒಗ್ಗಟ್ಟಿನಿಂದ ಎಲ್ಲರೂ ನಿಗದಿತ ಗುರಿ ಸಾಧಿಸಬೇಕು ಅಂತ ಟ್ರಂಪ್ ಕರೆ ನೀಡಿದ್ದಾರೆ.

ತಿಂಗಳ ಆರಂಭದಲ್ಲಿ ಕ್ಯಾಪಿಟಲ್ ಭವನದಲ್ಲಿ ನಡೆದ ಹಿಂಸಾಚಾರ ಅಮೆರಿಕನ್ನರನ್ನ ದಿಗ್ಭ್ರಮೆಗೊಳಿಸಿದೆ ಎಂದು ಖಂಡಿಸಿದ್ದಾರೆ. ತಮ್ಮ ಆಡಳಿತದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಆದರೆ ಎಲ್ಲೂ ಜೋ ಬೈಡೆನ್ ಹೆಸರು ಪ್ರಸ್ತಾಪಿಸಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *