ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿ ಈಗ ಕಣ್ಣೀರು ಹಾಕ್ಬೇಡಿ – ಬೇಗ್‌ ವಿರುದ್ಧ ಜಮೀರ್‌ ಕಿಡಿ

Public TV
2 Min Read

ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಈಗ ಮುಸ್ಲಿಮ್‌ ರಾಜಕೀಯ ನಾಯಕರಾದ ಜಮೀರ್‌ ಮತ್ತು ರೋಷನ್‌ ಬೇಗ್‌ ಮಧ್ಯೆ ಕಿತ್ತಾಟ ಆರಂಭಗೊಂಡಿದೆ.

ಮಾಜಿ ಸಚಿವ ಜಮೀರ್‌ ಅಹಮದ್‌ ಅವರು ಇಂದು 5 ಟ್ವೀಟ್‌ ಮಾಡಿ ರೋಷನ್‌ ಬೇಗ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ ರೋಷನ್‌ ಬೇಗ್‌ ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ.

ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್‌ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮ್‌ ಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು.

ಡಿಜೆಹಳ್ಳಿ ಗಲಭೆ ಬಗ್ಗೆ ಇಲ್ಲಿಯ ವರೆಗೆ ಮೌನವಹಿಸಿದ್ದ ರೋಷನ್‌ಬೇಗ್‌ ಅವರು ಇದ್ದಕ್ಕಿದ್ದ ಹಾಗೆ ಎಸ್‌ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ. ಇದನ್ನೂ ಓದಿ: ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ ರೋಷನ್‌ ಬೇಗ್‌ ಅವರು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ.

ಮಾನ್ಯ ರೋಷನ್‌ ಬೇಗ್‌ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ.

Share This Article
Leave a Comment

Leave a Reply

Your email address will not be published. Required fields are marked *