ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ – ಸಿಟ್ಟಾದ ಹ್ಯಾರಿಸ್

Public TV
2 Min Read

ಬೆಂಗಳೂರು: ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸಲ್ವೇ ನೀವ್ಯಾಕೆ ಒತ್ತಡ ಹಾಕುತ್ತೀರಾ ಅಂದಿದ್ದಕ್ಕೆ ಶಾಂತಿನಗರದ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಮೇಲೆ ಸಿಟ್ಟಾಗಿದ್ದಾರೆ.

ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ ಎಂದು ಮಾಜಿ ಸಚಿವ ರೋಷನ್ ಬೇಗ್ ಪೊಲೀಸ್ ಕಮೀಷನರ್ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್, ಗೋರಿಪಾಳ್ಯ, ಟಿಪ್ಪು ನಗರದಿಂದ ಬಂದಿರೋದನ್ನು ರೋಷನ್ ಬೇಗ್ ನೋಡಿದ್ದರೆ ಅವರು ಮೊನ್ನೆಯೇ ಹೇಳಬಹುದಿತ್ತು. ಇದರಿಂದ ತನಿಖೆ ನಡೆಸೋದಕ್ಕೆ ಸುಲಭವಾಗಿರೋದು ಎಂದು ವ್ಯಂಗ್ಯವಾಡಿದರು.

ನಡೆದಿರುವುದನ್ನು ನಾವು ಯಾರು ಒಪ್ಪಿಕೊಳ್ಳುತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಮಾನವೀಯತೆ ದೃಷ್ಟಿಯಿಂದ ಕಮಿಷನರ್ ಜೊತೆ ಮಾತನಾಡಲು ಬಂದಿದ್ದೇನೆ. ಇದರಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಎಂದರು.

ಈ ವೇಳೆ ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸುತ್ತಾರೆ. ನೀವ್ಯಾಕೆ ಒತ್ತಡ ಹಾಕುತ್ತೀರಿ ಎಂದು ಕೇಳಿದ್ದಕ್ಕೆ ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ ಎಂದು ಮರು ಪ್ರಶ್ನಿಸಿ ಪಬ್ಲಿಕ್ ಟಿವಿ ಮೇಲೆ ಹ್ಯಾರಿಸ್ ಸಿಟ್ಟಾದರು.

ಕಾಂಗ್ರೆಸ್ ನಾಯಕರು ಗಲಭೆಕೋರರ ಪರವಾಗಿ ನಿಂತಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಹ್ಯಾರಿಸ್, ನಾವು ಯಾವುದೇ ರೀತಿ ಒತ್ತಡವನ್ನು ಸರ್ಕಾರ ಮತ್ತು ಪೊಲೀಸರ ಮೇಲೆ ಹಾಕುವುದಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಏನು ಮಾಡಬೇಕೋ ಮಾಡಿ ಎಂದು ಹೇಳುತ್ತಿದ್ದೇವೆ. ಗಲಭೆ ನಡೆದ ಪ್ರದೇಶದಲ್ಲಿ ಕರ್ಫ್ಯೂ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾಪ ಅಮಾಯಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲಿ ಜನರು ಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾರೂ
ಹೊರಗೆ ಬಂದು ಓಡಾಡುವುದಕ್ಕೆ ಆಗುತ್ತಿಲ್ಲ. ಅವರಿಗೆ ಹಾಲು, ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ರೋಷನ್ ಬೇಗ್ ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡವು ಇದೆ. ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು. ಕಲಾಸಿ ಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು. ಹೊರಗಿನವರು ಯಾರ್ಯಾರೋ ಬಂದಿದ್ದರು ಅಂತ ಸ್ಥಳೀಯರೇ ಹೇಳುತ್ತಾರೆ. ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ, ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *