ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಟಗರು ಪುಟ್ಟಿ ಗರಂ

Public TV
2 Min Read

ಬೆಂಗಳೂರು: ಟಗರು ಹಾಗೂ ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ಮನ್ವಿತಾ ಕಾಮತ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಆಗಾಗ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಪೋಸ್ಟ್ ಹಾಕುತ್ತಿರುತ್ತಾರೆ. ಅದೇ ರೀತಿ ಸಾಮಾಜಿಕ ಆಗುಹೋಗುಗಳ ಕುರಿತು ಸಹ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪೊಲೀಸರಿಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿ ಕಿಡಿ ಕಾರಿದ್ದಾರೆ.

ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದೆ. ಹಲವರು ನಿರುದ್ಯೋಗಿಗಳಾಗಿದ್ದಾರೆ. ಲಾಕ್‍ಡೌನ್ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಭಾರತದಾದ್ಯಂತ ಚಿತ್ರೀಕರಣವೇ ಸ್ಥಗಿತವಾಗಿದೆ. ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಶೂಟಿಂಗ್‍ಗೆ ಅನುಮತಿ ನೀಡಿದರೂ ಚಿತ್ರೀಕರಣಕ್ಕೆ ಆಗಮಿಸಲು ಹೆಚ್ಚು ಜನ ಭಯ ಪಟುತ್ತಿದ್ದಾರೆ. ಅಲ್ಲದೆ ಬಹುತೇಕ ನಟ ನಟಿಯರು ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇನ್ನೂ ಹಲವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

ನಟಿ ಮನ್ವಿತಾ ಕಾಮತ್ ಲಾಕ್‍ಡೌನ್ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಇದೇ ವೇಳೆ ಪೊಲೀಸರ ದುರ್ವರ್ತನೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೀದಿ ಬದಿ ಬಾಳೆಹಣ್ಣು ಮಾರುತ್ತಿದ್ದ ವೃದ್ಧ ವ್ಯಾಪಾರಿಯ ಬಳಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದು, ಆತ ಮಾರುತ್ತಿದ್ದ ಹಣ್ಣಿನ ಟ್ರೈಯನ್ನು ಎತ್ತಿಕೊಂಡು ಹೋಗುವ ದೃಶ್ಯವನ್ನು ಟ್ವೀಟ್ ಮಾಡಿದ್ದಾರೆ.

ವೃದ್ಧ ವ್ಯಾಪಾರಿಯಿಂದ ಬಾಳೆಹಣ್ಣು ತುಂಬಿದ್ದ ಟ್ರೈ ತೆಗೆದುಕೊಂಡು ಪೊಲೀಸರು ತಮ್ಮ ಜೀಪ್‍ನಲ್ಲಿ ಇಟ್ಟುಕೊಳ್ಳುತ್ತಾರೆ. ಆಗ ವೃದ್ಧ ಅಳಲು ಪ್ರಾರಂಭಿಸುತ್ತಾರೆ. ಇಷ್ಟಾದರೂ ಪೊಲೀಸರು ನೋಡುತ್ತಲೇ ಇರುತ್ತಾರೆಯೇ ಹೊರತು ಟ್ರೈ ಮರಳಿ ನೀಡುವುದಿಲ್ಲ. ತಮ್ಮ ಜೀಪ್‍ನಲ್ಲಿ ತುಂಬಿಕೊಳ್ಳುತ್ತಾರೆ. ಇದರಿಂದ ದುಃಖಿತನಾದ ವ್ಯಾಪಾರಿ ಸೈಕಲ್ ತಳ್ಳಿಕೊಂಡು ಮುಂದೆ ಸಾಗುತ್ತಾರೆ. ಈ ವಿಡಿಯೋ ಟ್ವೀಟ್ ಮಾಡಿ ಮನ್ವಿತಾ, ಯಾಕೆ….? ಎಂದು ಬರೆದು ಬೇಸರದ ಚಿನ್ಹೆ ಹಾಕಿದ್ದಾರೆ.

ಇದಕ್ಕೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಅವರು ಅಳುತ್ತಿರುವುದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಅವರನ್ನು ಬೇಗ ಹುಡುಕಿ ಸಹಾಯ ಮಾಡಬೇಕಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವಿಡಿಯೋ ವೈರಲ್ ಮಾಡಿ ಭ್ರಷ್ಟ ಪೊಲೀಸರಿಗೆ ಶಿಕ್ಷೆಯಾಗುವಂತೆ ಮಾಡಿ ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನ್ವಿತಾ ಕಾಮತ್ ಸದ್ಯ ರಾಜಸ್ಥಾನ್ ಡೈರೀಸ್ ಚಿತ್ರದ ಡಬ್ಬಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಇದು ಕನ್ನಡ ಹಾಗೂ ಮರಾಠಿ ಎರಡು ಭಾಷೆಗಳಲ್ಲಿ ತಯಾರಾಗುತ್ತಿದೆ. ಅಲ್ಲದೆ ತೆಲುಗಿಗೂ ಡಬ್ ಆಗುತ್ತಿದೆ. ಶಿವ 143 ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ರೇನ್‍ಬೋ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ. ಒಟ್ಟು ಮೂರು ಚಿತ್ರಗಳಲ್ಲಿ ಮನ್ವಿತಾ ಕಾಮತ್ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *