ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ

Public TV
1 Min Read

ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿರುವ ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯ ಕುರಿತಾಗಿ ಟ್ವೀಟ್ ಮಾಡುವ ಮೂಲಕವಾಗಿ ಕ್ಷಮೆಯಾಚಿಸಿದ್ದಾರೆ.

ಉಪೇಂದ್ರ ಅವರು ನಿಧಿ ಸಂಗ್ರಹಿಸುವ ಮೂಲಕ ಅಗತ್ಯವಸ್ತುಗಳು ಹಾಗೂ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಇದರ ನಡುವೆ ವಿವಾದವೊಂದಕ್ಕೀಡಾಗಿದ್ದರು. ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟಿದ್ದು, ಅದಕ್ಕೆ ಈಗ ಕ್ಷಮೆ ಯಾಚಿಸಿದ್ದಾರೆ.

ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿರುವ ಹೇಳಿಕೆ ಯಾರೋ ಇಂಗ್ಲಿಷ್‍ನವರು ಹೇಳಿರುವುದು ಎಂದು ತಿಳಿದು ಅದರ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಅರಿತ ಉಪೇಂದ್ರ ಈ ಹೇಳಿಕೆಯನ್ನು ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದು ಎಂದು ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟೆ. ಕ್ಷಮೆ ಇರಲಿ ಎಂದು ಉಪೇಂದ್ರ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳುತ್ತಿದ್ದಂತೆಯೇ ಸಾಕಷ್ಟು ಮಂದಿ ತಿಳಿಯದೆ ಮಾಡಿದ್ದು ತಪ್ಪು ಅದನ್ನು ಅರಿತುಕೊಳ್ಳುವುದು ಮುಖ್ಯ. ನೀವು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಮೊದಲು ಸಂವಿಧಾನವನ್ನು ಓದಿಕೊಂಡು ನಂತರ ಪ್ರಜಾಕೀಯ ಮಾಡಲು ಹೋಗಿ ಎಂದು ವ್ಯಂಗ್ಯ ಮಾಡಿದ್ದಾರೆ. ಉಪೇಂದ್ರ ಅವರ ನಿಧಿ ಸಂಗ್ರಹ ಕಾರ್ಯಕ್ಕೆ ಸಾಕಷ್ಟು ಕಡೆಗಳಿಂದ ನೆರವು ಹರಿದು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *