ಅಭಿಮಾನಿಗಳಿಂದ ಅಂಬರೀಶ್‌ಗೆ ಗುಡಿ ನಿರ್ಮಾಣ

Public TV
2 Min Read

ಮಂಡ್ಯ; ಅಂಬರೀಶ್ ಅಂದರೆ ಅಭಿಮಾನಿಗಳ ಆರಾಧ್ಯದೈವ. ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆಬಾಗದವರೆ ಇಲ್ಲ. ಆದರೆ ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬುತ್ತಿದೆ. ವ್ಯಕ್ತಿ ಸತ್ತರು ಪ್ರೀತಿ ಸಾಯಲ್ಲ ಅನ್ನೋ ಹಾಗೇ ಅಭಿಮಾನಿಗಳು ಅಂಬಿ ಮೇಲಿನ ಪ್ರೀತಿ ಕಡಿಮೆ ಮಾಡಿಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗದ ಕರ್ಣನಿಗೆ ಗುಡಿ ಕಟ್ಟಿದ್ದಾರೆ. ಅಂಬರೀಶ್‍ರವರ ವ್ಯಕ್ತಿತ್ವದ ನೆನಪನ್ನು ಮುಂದಿನ ಪೀಳಿಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ.

ನವೆಂಬರ್ 24, 2018 ರೆಬೆಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿದರು. ನೆಚ್ಚಿನ ನಟನ ಕಳೆದುಕೊಂಡ ಕೋಟ್ಯಂತರ ಅಭಿಮಾನಿಗಳು ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದ್ದರು. ಅಭಿಮಾನಿಗಳಿಗೆ ಮಂಡ್ಯದ ಗಂಡಿನ ಮೇಲೆ ಪ್ರೀತಿ ಎಷ್ಟಿದೆ ಅನ್ನೋದನ್ನು ಅಂಬಿಯ ಅಂತಿಮ ದರ್ಶನಕ್ಕೆ ಬಂದಿದ್ದ ಜನಸಾಗರ ಸಾರಿ ಸಾರಿ ಹೇಳುತ್ತಿತ್ತು. ಹೀಗೆ ಅಂಬರೀಶ್ ಸಾವಿನ ಕಹಿನೆನಪಿಗೆ 2 ವರ್ಷ ತುಂಬುತ್ತಿದೆ. ಆದರೆ ಅಭಿಮಾನಿಗಳು ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿಯನ್ನೇ ಅವರ ಸಾವಿನ ನಂತರವೂ ಮುಂದುವರೆಸಿದ್ದಾರೆ. ನಲ್ಮೆಯ ನಟನಿಗೆ ಗುಡಿಕಟ್ಟಿ ಪೂಜಿಸಲು ನಿರ್ಧರಿಸಿದ್ದಾರೆ.

ಅಂಬಿಯ ಗುಡಿ ನಿರ್ಮಾಣವಾಗಿರೋದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ. ಹೊಟ್ಟೆಗೌಡನ ದೊಡ್ಡಿ ಗ್ರಾಮದ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ ಆರಾಧ್ಯದೈವ. ಹಾಗಾಗಿ ಈ ಜನರು ಅಂಬಿಯನ್ನ ದೇವರೆಂದೆ ಭಾವಿಸಿದ್ದಾರೆ. ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ. ಪ್ರತಿವರ್ಷ ಅಂಬರೀಶ್ ಹುಟ್ಟಿದ ದಿನ ಮೇ.29ರಂದು ಈ ಊರಲ್ಲಿ ಸಂಭ್ರಮ ಮನೆಮಾಡುತ್ತದೆ. ಮನೆ ಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಬರ್ತಡೇಯನ್ನ ಊರ ಹಬ್ಬದ ರೀತಿಯಲ್ಲಿ ಆಚರಿಸುವ ಇವರು, ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಅಂಬರೀಶ್‍ರವರ ಚಿತಾಭಸ್ಮ ತಂದು ತಮ್ಮ ಕಚೇರಿಯಲ್ಲಿಟ್ಟು ಪೂಜಿಸಿದ್ದ ಅಭಿಮಾನಿಗಳು. ಅಭಿಮಾನಿಗಳಿಂದಲೇ ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ. ಗುಡಿಯ ಒಳಭಾಗದಲ್ಲಿ ಅಂಬರೀಶ್‍ರವರ ಕಂಚಿನ ಪುತ್ಥಳಿ ಇಡಲಾಗಿದೆ. ಈ ಗುಡಿಗಾಗಿ 7-8 ಲಕ್ಷ ಖರ್ಚು ಮಾಡಿರುವ ಗ್ರಾಮಸ್ಥರು, ಅಂಬಿಯ ನೆನಪು ಎಂದಿಗೂ ಅಮರ ಅವರು ಬದುಕಿದ್ದ ರೀತಿ ಅವರ ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ಈ ಪುತ್ಥಳಿ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *