ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

Public TV
2 Min Read

ನವದೆಹಲಿ: ಅಫ್ಘಾನಿಸ್ತಾನದ ಆಡಳಿತ ಮತ್ತೆ ತಾಲಿಬಾನ್ ಉಗ್ರರ ಕೈಗೆ ಹೋಗಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.

ಈ ಹಿಂದಿನ ತಾಲಿಬಾನ್‍ಗಳ ರೀತಿಯಲ್ಲ. ನಾವು ಬದಲಾಗಿದ್ದೇವೆ ಎಂದು ಹೇಳಿದ್ದರೂ ಅವರು ಈ ಹಿಂದೆ ಮಾಡಿರುವ ದುಷ್ಕೃತ್ಯಗಳನ್ನು ನಾವು ಮರೆಯುವಂತಿಲ್ಲ. ಕಂದಹಾರ್ ವಿಮಾನ ಅಪಹರಣ ಪ್ರಕರಣ ಭಾರತದ ಕರಾಳ ನೆನಪುಗಳಲ್ಲಿ ಒಂದು.

ಅಪಹರಣ ಸುಖಾಂತ್ಯವಾದರೂ ಕುಖ್ಯಾತ ಭಯೋತ್ಪಾದಕ ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸಬೇಕಾಗಿತ್ತು. ಈಗ ಮತ್ತೆ ಭಾರತಕ್ಕೆ ಅಫ್ಘಾನ್ ನೆಲದಲ್ಲಿನ ಬೆಳವಣಿಗಳು ಆತಂಕಕಾರಿಯಾಗಿ ಕಾಡುತ್ತಿವೆ. ಪಾಕಿಸ್ತಾನ ನೆಲದಿಂದ ಎಸಗಲಾಗುತ್ತಿರುವ ಭಾರತ ವಿರೋಧಿ ಭಯೋತ್ಪಾದಕ ಕೃತ್ಯಗಳ ನಡುವೆ ಈಗ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ಪಡೆದಿರುವುದು ಅಪಾಯಕಾರಿ ಬೆಳವಣಿಗೆ.

ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್-ಅಮೆರಿಕ ಜೊತೆಗೆ ಹಲವು ತಿಂಗಳಿಂದ ಸಂಧಾನ ಮಾತುಕತೆ ನಡೆಯುತ್ತಿದೆ. ಇದೇ ವೇಳೆ ಭಾರತ ಕೂಡಾ ತಾಲಿಬಾನಿಗಳ ಜೊತೆಗೆ ಮಾತುಕತೆ ನಡೆಸಿರಬಹುದು ಎಂದು ಕತಾರ್ ಜೂನ್‍ನಲ್ಲಿ ಹೇಳಿಕೆ ನೀಡಿತ್ತು. ಜೂನ್‍ನಲ್ಲಿ ಎರಡು ಬಾರಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕತಾರ್‍ಗೆ ಭೇಟಿ ನೀಡಿದ್ದರು. ಆದರೆ ತಾಲಿಬಾನ್ ಜೊತೆಗಿನ ಮಾತುಕತೆ ಬಗ್ಗೆ ಭಾರತ ಸರ್ಕಾರ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲ.

ಭಾರತಕ್ಕೆ ಇರುವ ಸವಾಲುಗಳು:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭಗೊಂಡಿದ್ದು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದ್ದೀನ್ ಇನ್ನಷ್ಟು ಕೃತ್ಯಗಳಿಗೆ ಯತ್ನಿಸಬಹುದು. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಮಿಲಿಟರಿ, ಗುಪ್ತಚರ ಸಂಸ್ಥೆ ಐಎಸ್‍ಐ ನೇರ ಹಸ್ತಕ್ಷೇಪವಿದೆ. ಈಗಾಗಲೇ ತಾಲಿಬಾನಿಗಳಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಇನ್ನಷ್ಟು ಬಾಲ ಬಿಚ್ಚಲು ಯತ್ನಿಸಬಹುದು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

ತಾಲಿಬಾನಿಗಳ ಕೈವಶ ಬಳಿಕ ಅಫ್ಘಾನ್ ಬಗ್ಗೆ ಚೀನಾ ಆಸಕ್ತಿ ಹೆಚ್ಚಿಸಿಕೊಂಡಿದೆ. ಈಗಾಗಲೇ ತಾಲಿಬಾನ್ ಪರ ಸಾಫ್ಟ್ ಕಾರ್ನರ್ ತೋರಿಸಿರುವ ಚೀನಾ ರೈಲು, ಬೆಲ್ಟ್-ರೋಡ್ ಯೋಜನೆಗಳನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವ ಮೂಲಕ ಪ್ರಭಾವ ಬೀರಬಹುದು. ದಕ್ಷಿಣ ಏಷ್ಯಾದಲ್ಲಿ ಚೀನಾದ ಕುತಂತ್ರಗಳಿಗೆ ಅಫ್ಘಾನಿಸ್ತಾನವೂ ವೇದಿಕೆ ಆಗಬಹುದು.

Share This Article
Leave a Comment

Leave a Reply

Your email address will not be published. Required fields are marked *