ಅಪ್ಪು ಅಭಿಮಾನಿಗಳಿಂದ ರಾಯಚೂರಿನಲ್ಲಿ ನಿತ್ಯ ನಿರ್ಗತಿಕರಿಗೆ ಅನ್ನದಾನ

Public TV
2 Min Read

ರಾಯಚೂರು: ಲಾಕ್ ಡೌನ್‍ನಿಂದಾಗಿ ಬಹಳ ಜನ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ರಾಯಚೂರಿನಲ್ಲಿನ ನಿರ್ಗತಿಕರು, ಭಿಕ್ಷುಕರಿಗೆ ನಟ ಪುನಿತ್ ರಾಜಕುಮಾರ್ ಅಭಿಮಾನಿಗಳು ಅನ್ನದಾತರಾಗಿದ್ದಾರೆ. ಕೊರೊನಾ ಮೊದಲ ಅಲೆಯಲ್ಲೂ ಅನ್ನ ಸೇವೆ ಮಾಡಿದ್ದ ಅಪ್ಪು ಅಭಿಮಾನಿಗಳು ಈಗ 111 ದಿನ ಪೂರೈಸಿ ಕೈಲಾಗದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಕೊರೊನಾ ಸೋಂಕು ಎಷ್ಟೋ ಜನರನ್ನ ಬಲಿ ಪಡೆದಿದೆ. ಜೊತೆ ಜೊತೆಗೆ ಅದೆಷ್ಟೋ ಜನರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಲಾಕ್ ಡೌನ್ ಕೊರೊನಾ ಸೋಂಕು ಹರಡುವಿಕೆಯನ್ನ ನಿಯಂತ್ರಿಸುತ್ತಿದೆ ನಿಜ, ಆದ್ರೆ ಒಂದೊಂತ್ತಿನ ಊಟವೂ ಸಿಗದೆ ಎಷ್ಟೋ ಜನ ಉಪವಾಸ ಅನುಭವಿಸುತ್ತಿರುವುದು ಅಷ್ಟೇ ಸತ್ಯ. ಇದನ್ನು ಮನಗಂಡು ರಾಯಚೂರಿನಲ್ಲಿ ಅಪ್ಪು ಯೂತ್ ಬ್ರಿಗೇಡ್‍ನ ಸದಸ್ಯರು ಹಾಗೂ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ತಮ್ಮ ಸ್ವಂತ ಹಣದಲ್ಲೇ ನಿರ್ಗತಿಕರು, ಕೂಲಿ ಕೆಲಸಗಾರರು, ಭಿಕ್ಷುಕರಿಗೆ ನಿತ್ಯ ಊಟ ,ತಿಂಡಿ ನೀಡುತ್ತಿದ್ದಾರೆ. ಇವರ ಸೇವೆ ಕಂಡು ಆಗಾಗ ದಾನಿಗಳು ಸಹ ಸಹಾಯಹಸ್ತ ಚಾಚಿದ್ದಾರೆ.

ಕೊರೊನಾ ಮೊದಲ ಅಲೆ ವೇಳೆ ಲಾಕ್ ಡೌನ್ ಸಂದರ್ಭದಲ್ಲಿ ಅನ್ನದಾನ ಶುರುಮಾಡಿದ್ದಾರೆ. ಪುನಃ ಲಾಕ್ ಡೌನ್ ಇರುವುದರಿಂದ ಸೇವೆ ಮುಂದುವರಿಸಿದ್ದು ಈಗ 111 ದಿನ ಪೂರೈಸಿದ್ದಾರೆ. 111 ವರ್ಷಗಳ ಕಾಲ ಬದುಕಿ ತ್ರಿವಿಧ ದಾಸೋಹದಿಂದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸೇವೆ ಮುಂದುವರಿಸಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ಎಷ್ಟೇ ಕಷ್ಟವಾದರೂ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಅಪ್ಪು ಯೂತ್ ಬ್ರಿಗೇಡ್‍ನ ಜಿಲ್ಲಾಧ್ಯಕ್ಷ ಸಾಧೀಕ್ ಹೇಳಿದ್ದಾರೆ.

ಅಭಿಮಾನಿಗಳ ಅನ್ನ ಸೇವೆಗೆ ಸ್ವತಃ ಪುನಿತ್ ರಾಜಕುಮಾರ್ ಮೆಚ್ಚಿಗೆ ಸೂಚಿಸಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದು ಯುವಕರಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ. ಇಂದಿರಾ ಕ್ಯಾಂಟಿನ್, ಹೋಟೆಲ್‍ಗಳೆಲ್ಲಾ ಬಂದ್ ಆಗಿರುವುದರಿಂದ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ ಬಳಿಯ ಸುಮಾರು 70 ಜನರಿಗೆ ಅಪ್ಪು ಅಭಿಮಾನಿಗಳೇ ಅನ್ನದಾತರು.

ಒಟ್ಟಿನಲ್ಲಿ ಸಂಕಷ್ಟ ಸಮಯದಲ್ಲಿ ಜನ ತಮ್ಮ ಜೀವ ಜೀವನ ಉಳಿಸಿಕೊಳ್ಳಲು ಪರದಾಡುತ್ತಿರುವಾಗ ಈ ಯುವಕರು ನಿರ್ಗತಿಕರ ಸೇವೆಗೆ ಮುಂದಾಗಿದ್ದಾರೆ. ಯಾರ ಮುಂದೆ ಸಹಾಯಕ್ಕೆ ಕೈಚಾಚದೆ ತಮ್ಮ ಕೈಲಾದಷ್ಟು ಅನ್ನದಾನ ಮಾಡಲು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *