ಅಪ್ಪನಿಗಾಗಿ 1,200 ಕಿಮೀ ಸೈಕಲ್ ತುಳಿದ ಬಾಲಕಿಗೆ ಇವಾಂಕಾ ಟ್ರಂಪ್ ಮೆಚ್ಚುಗೆ

Public TV
2 Min Read

ನವದೆಹಲಿ: ಲಾಕ್‍ಡೌನ್ ವೇಳೆ ಅಪ್ಪನಿಗಾಗಿ 1,200 ಕಿಮೀ ಸೈಕಲ್ ತುಳಿದ ಬಿಹಾರ ಬಾಲಕಿಯ ಧೈರ್ಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

15 ವರ್ಷದ ಬಾಲಕಿ ಜ್ಯೋತಿ ಕುಮಾರಿ ಮತ್ತು ಅವರ ತಂದೆ ಆಟೋ ಓಡಿಸಿಕೊಂಡು ದೆಹಲಿಯ ಗುರುಗ್ರಾಮ್‍ನಲ್ಲಿ ವಾಸಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದ ವೇಳೆ ಅವರಿಗೆ ಅಲ್ಲಿ ಊಟ ಸಿಗದೆ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೇ ದೆಹಲಿಯಿಂದ ಬಿಹಾರದವರೆಗೂ ಸೈಕಲ್‍ನಲ್ಲಿ ಪ್ರಯಾಣ ಮಾಡಿದ್ದರು. ಬಾಲಕಿಯ ಈ ಧೈರ್ಯಕ್ಕೆ ಇಡೀ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ ಇದೇ ವಿಚಾರವಾಗಿ ಇವಾಂಕಾ ಟ್ರಂಪ್ ಅವರು ಕೂಡ ಟ್ವೀಟ್ ಮಾಡಿದ್ದು, 15 ವರ್ಷದ ಜ್ಯೋತಿ ಕುಮಾರಿ, ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಸುಮಾರು 1,200 ಕಿಮೀ ಸೈಕಲ್ ತುಳಿದು ಕೊನೆಗೂ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಈ ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರ ಸಾಧನೆಯು ಭಾರತೀಯ ಜನರ ಮತ್ತು ಅಲ್ಲಿನ ಸೈಕಲ್ ಫೆಡರೇಶನ್‍ನ್ನು ಕಲ್ಪನೆಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ತಂದೆಯೊಂದಿಗೆ ಬಾಲಕಿ ಜ್ಯೋತಿ ಕುಮಾರಿ ಕ್ರಮಿಸಿದ್ದಳು. ಮೇ 10ರಂದು ದೆಹಲಿಯಿಂದ ಪ್ರಾರಂಭವಾಗಿದ್ದ ಇವರ ಪ್ರಯಾಣ 1,200 ಕಿಮೀ ದೂರ ಇರುವ ಬಿಹಾರ ಸ್ವಗ್ರಾಮದಲ್ಲಿ ಅಂತ್ಯವಾಗಿತ್ತು. ಸದ್ಯ ಬಾಲಕಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಸೈಕಲ್ ಫೆಡರೇಶನ್ ಅಫ್ ಇಂಡಿಯಾ ಆಕೆಗೆ ತರಬೇತಿ ನೀಡಲು ಆಕಾಡೆಮಿಯಲ್ಲಿ ದಾಖಲಾತಿ ನೀಡಲು ಸಿದ್ಧವಾಗಿದೆ ಎಂದು ತಿಳಿಸಿದೆ.

ಅಲ್ಲದೇ ಆಕೆಯನ್ನು ಬಿಹಾರದಿಂದ ದೆಹಲಿಯ ಆಕಾಡೆಮಿಗೆ ಕರೆಯಿಸಿಕೊಳ್ಳಲು ತಯಾರಿ ನಡೆಸಿದೆ. ಅಲ್ಲದೇ ಇದಕ್ಕಾಗುವ ಎಲ್ಲಾ ವೆಚ್ಚವನ್ನು ಆಕಾಡೆಮಿ ಭರಿಸಲಿದೆ. ಬಾಲಕಿ ಜ್ಯೋತಿಗೆ ಮೊದಲು ಟ್ರಯಲ್ಸ್ ನಡೆಸುತ್ತೇವೆ. ಆ ಬಳಿಕ ವಸತಿ ವ್ಯವಸ್ಥೆ ಕಲ್ಪಿಸಿ ತರಬೇತಿ ನೀಡಲಾಗುವುದು ಎಂದು ಆಕಾಡೆಮಿ ಅಧ್ಯಕ್ಷ ಓಂಕರ್ ಸಿಂಗ್ ತಿಳಿಸಿದ್ದಾರೆ. ಆಕಾಡೆಮಿಯಲ್ಲಿ ಏಷ್ಯಾದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕ್ರೀಡಾ ವಿಶ್ವಸಂಸ್ಥೆಯು ಯೂನಿಯನ್ ಸೈಕ್ಲಿಸ್ಟ್ ಇಂಟರ್ ನ್ಯಾಷನಲ್ (ಯುಸಿಐ) ಮಾನ್ಯತೆಯನ್ನು ಪಡೆದಿದೆ.

ಏನಿದು ಘಟನೆ?
ಬಿಹಾರಕ್ಕೆ ಸೇರಿದ 15 ವರ್ಷದ ಬಾಲಕಿ ಜ್ಯೋತಿ, ತಂದೆ ಗುರುಗ್ರಾಮದಲ್ಲಿ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಕಾರಣದಿಂದ ಅವರಿಗೆ ಗುರುಗ್ರಾಮ್‍ನಲ್ಲಿ ತಿನ್ನಲು ಊಟ ಕೂಡ ಇಲ್ಲದೇ ಸಮಸ್ಯೆ ಎದುರಿಸಿದ್ದರು. ಅಲ್ಲದೇ ಬಾಡಿಗೆ ಮನೆಯಲ್ಲಿದ್ದ ಅವರನು ಮಾಲೀಕ ಹಣ ಪಾವತಿಸಬೇಕು, ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಸೂಚಿಸಿದ್ದ. ಪರಿಣಾಮ ಹತಾಶರನ್ನಾಗಿ ಅವರು ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದರು. ಟ್ರಕ್ ಚಾಲಕನ ಬಳಿ ಹಳ್ಳಿಗೆ ಕರೆದೊಯ್ಯುವಂತೆ ಕೇಳಿದ ಸಂದರ್ಭದಲ್ಲಿ ಆತ 6,000ಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ತಂದೆ ಬಳಿ ಹೇಳಿ 600 ರೂ.ಗೆ ಸೈಕಲ್ ಖರೀದಿಸಿದ್ದ ಅವರು ಅಲ್ಲಿಂದ ದರ್ಭಾಂಗಕ್ಕೆ ಪ್ರಯಾಣ ಬೆಳೆಸಿದ್ದರು.

ಹಗಲು, ರಾತ್ರಿ ಎನ್ನದೇ ತಂದೆಯೊಂದಿಗೆ ಸೈಕಲ್ ತುಳಿದಿದ್ದ ಬಾಲಕಿ ತಂದೆಯೊಂದಿಗೆ ಗ್ರಾಮಕ್ಕೆ ಆಗಮಿಸಿದ್ದಳು. ಪ್ರಯಾಣದ ನಡುವೆ ದಾನಿಗಳು ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಸೇವಿಸಿದ್ದರು. ಇತ್ತ ಹಳ್ಳಿಗೆ ಆಗಮಿಸಿರುವ ಜ್ಯೋತಿ ಹಾಗೂ ಆಕೆಯ ತಂದೆಯನ್ನು ಕ್ವಾರಂಟೈನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *