ಅಪಘಾತದಲ್ಲಿ ಮೃತಪಟ್ಟ ಬಾಲಕ ಹೈನುಗಾರಿಕೆ ಉದ್ಯಮದಲ್ಲಿ ಭಾಗಿ – 17 ಲಕ್ಷ ಪರಿಹಾರ ನೀಡಿ

Public TV
2 Min Read

– ಗ್ರಾಮೀಣ ಭಾಗದಲ್ಲಿ ಮಕ್ಕಳು ಹೈನುಗಾರಿಕೆ ಉದ್ಯಮದಲ್ಲಿರುವುದು ಸಾಮಾನ್ಯ
– ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ಆದೇಶ

ಬೆಂಗಳೂರು: ಅಪಘಾತಗೊಂಡು ಮೃತಪಟ್ಟ 17 ವರ್ಷದ ಬಾಲಕನು ಹೈನುಗಾರಿಕೆ ಉದ್ಯಮದಲ್ಲಿ ಭಾಗಿ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಮಹತ್ವದ ಆದೇಶ ಪ್ರಕಟಿಸಿದೆ.

ಎಂಎಚ್‌ ಅಮಿತ್‌ ಎಂಬಾತನ ಕುಟುಂಬದವರು ರಾಣೇಬೆನ್ನೂರಿನ ಮೋಟಾರು ಅಪಘಾತ ಪರಿಹಾರಗಳ ಟ್ರಿಬ್ಯುನಲ್‌ ನೀಡಿದ್ದ 6.6 ಲಕ್ಷ ಪರಿಹಾರ ಮೊತ್ತದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ 1986 ಸೆಕ್ಷನ್‌ 3 ಕೆಲವೊಂದು ಉದ್ಯೋಗದಲ್ಲಿ ಬಾಲಕಾರ್ಮಿಕರು ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ಆದರೆ ಇದು 17 ವರ್ಷದ ಬಾಲಕ ಹೈನುಗಾರಿಕೆ ಉದ್ಯಮದಲ್ಲಿ ತೊಡಗುವುದನ್ನು ನಿಷೇಧಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅಥವಾ ಈ ರೀತಿಯ ಕೆಲಸದಲ್ಲಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತೊಡಗುವುದು ಸಾಮಾನ್ಯ ಹೈಕೋರ್ಟ್‌ನ ನ್ಯಾ. ಜಿ. ನರೇಂದರ್‌ ಮತ್ತು ನ್ಯಾ. ಎಂಐ ಅರುಣ್‌ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಟ್ರಿಬ್ಯುನಲ್‌ ಈ ಎಲ್ಲ ವಿಚಾರವನ್ನು ಪರಿಗಣಿಸದೇ ಕೇವಲ ಬಾಲಕ ಎಂದು ಅಭಿಪ್ರಾಯಕ್ಕೆ ಬಂದಿರುವುದು ಸರಿಯಲ್ಲ ಎಂದು ಹೇಳಿದ ಪೀಠ ಪರಿಹಾರದ ಮೊತ್ತವನ್ನು 17 ಲಕ್ಷಕ್ಕೆ ಏರಿಸಿ ಆದೇಶ ಪ್ರಕಟಿಸಿತು.

ಏನಿದು ಪ್ರಕರಣ?
2017ರ ಜುಲೈ 17 ರಂದು ಎನ್‌ಆರ್‌ ಪುರ ರಸ್ತೆಯಲ್ಲಿ ಬೈಕಿಗೆ ಟ್ರಕ್‌ ಗುದ್ದಿತ್ತು. ಈ ರಸ್ತೆ ಅಪಘಾತದಲ್ಲಿ ಹಿಂದೆ ಕುಳಿತುಕೊಂಡು ಗಂಭೀರವಾಗಿ ಗಾಯಗೊಂಡಿದ್ದ 17 ವರ್ಷದ ಅಮಿತ್‌ ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮದ ಪೋಷಕರಾದ ಎಂಇ ಹೊನ್ನಪ್ಪ ಮತ್ತು ಚೇತನಾ ಅವರು ಮಗ ಅಮಿತ್‌ ಮೃತಪಟ್ಟ ಹಿನ್ನೆಲೆಯಲ್ಲಿ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿ ಟ್ರಿಬ್ಯುನಲ್‌ ಮೊರೆ ಹೋಗಿದ್ದರು. ವಿದ್ಯಾರ್ಥಿಯಾಗಿದ್ದ ಅಮಿತ್‌ ಹೈನುಗಾರಿಕೆಯಲ್ಲಿ ತೊಡಗಿದ್ದ. ಹೀಗಾಗಿ ಆತನು ಕುಟುಂಬದಲ್ಲಿ ದುಡಿಯುವ ಸದಸ್ಯರಲ್ಲಿ ಒಬ್ಬನಾಗಿದ್ದ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

 

 

ಈ ಪ್ರಕರಣದ ವಿಚಾರಣೆ ನಡೆಸಿದ್ದ ಟ್ರಿಬ್ಯುನಲ್‌ 2018ರ ಸೆ.25 ರಂದು ತೀರ್ಪು ಪ್ರಕಟಿಸಿತ್ತು. ಸಲ್ಲಿಕೆಯಾಗಿರುವ ಸಾಕ್ಷ್ಯಗಳು ಅಮಿತ್‌ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದ ಎಂಬುದನ್ನು ಸಾಬೀತು ಪಡಿಸಲು ವಿಫಲವಾಗಿದೆ. ಹೀಗಾಗಿ ಆತನನ್ನು ಆದಾಯ ಇಲ್ಲದ ವ್ಯಕ್ತಿ ಮತ್ತು ಮಗು ಎಂದು ಪರಿಗಣಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟು 6.6 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಪರಿಹಾರದ ಮೊತ್ತ ಬಹಳ ಕಡಿಮೆ ಆಗಿದೆ ಎಂದು ಹೇಳಿ ಪೋಷಕರು ಟ್ರಿಬ್ಯುನಲ್‌ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *