ಅನುದಾನ ಸದ್ಬಳಕೆಯಲ್ಲಿ ತುಮಕೂರು ರಾಜ್ಯದಲ್ಲಿಯೇ ಪ್ರಥಮ – ನಾರಾಯಣಗೌಡ

Public TV
2 Min Read

ತುಮಕೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಅನುದಾನ ಬಳಕೆ ವಿಚಾರದಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ. ಕೋವಿಡ್ ನಿಂದ ಲಾಕ್ ಡೌನ್ ಆಗಿದ್ದರೂ ಕೆಲಸ ವೇಗವಾಗಿ ನಡೆದಿದೆ. ಬಹುತೇಕ ಜಿಲ್ಲೆಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹತ್ವ ಏನು ಎನ್ನುವುದನ್ನು ರಾಜ್ಯಕ್ಕೆ ತೋರಿಸಿಕೊಡುತ್ತೇನೆ. ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಪ್ರತಿ ತಾಲೂಕು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ. ಅದಕ್ಕಾಗಿಯೆ ಎಲ್ಲ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿದ್ದೇನೆ. ತುಮಕೂರಿನಲ್ಲಿ ಭವ್ಯವಾದ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹೈಟೆಕ್ ಆಗಲಿದೆ. ಅಲ್ಲಿ ಕಾಮಗಾರಿ ಆರಂಭವಾದಾಗ ತುಮಕೂರಿನ ಕ್ರೀಡಾಂಗಣವನ್ನು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗೆ ಬಳಸಬೇಕು. ಅಷ್ಟು ವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಕ್ರೀಡಾ ಇಲಾಖೆ ಅಡಿ ಬಾಕಿ ಇರುವ ಕಾಮಗಾರಿಗಳು ಶೀಘ್ರ ಮುಗಿಯಬೇಕು ಎಂದರು.

ಜಿಲ್ಲೆಯಲ್ಲಿ ಹೊಸ ಬೆಳೆ ಬೆಳೆಯುತ್ತಿರುವ ಮೂಸಂಬಿ, ಡ್ರಾಗನ್ ಫ್ರೂಟ್ ಬಗ್ಗೆ ಮಾಹಿತಿ ಪಡೆದ ಸಚಿವರು, ಬೆಳೆ ವಿಮೆಗೆ ಒತ್ತು ಕೊಡುವಂತೆಯೂ ತಿಳಿಸಿದರು. ಅಡಿಕೆ ಬೆಳೆಯ ಹನಿ ನೀರಾವರಿಗೆ ಸಬ್ಸಿಡಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮನವಿ ಮಾಡಿದಾಗ, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹಾಲ್‍ನಲ್ಲಿ ಫುಲ್ ಗ್ಯಾಂಗ್‍ಸ್ಟರ್ಸ್ ಇದ್ದಾಗ ಮಾತ್ರ ಮಾನ್‍ಸ್ಟರ್ ಎಂಟ್ರಿ

ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಕಬಡ್ಡಿ, ಕೊಕ್ಕೋ ಕ್ರೀಡೆಗೆ ಬಹಳ ಹೆಸರುವಾಸಿಯಾಗಿತ್ತು. ಅದರೆ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಯೇ ಇಲ್ಲದಂತಾಗಿದೆ. ಹಾಗಾಗಿ ಕ್ರೀಡಾ ಚಟುವಟಿಕೆಗೆ ಒತ್ತು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಅಲ್ಲದೆ ರೈತರು ಮತ್ತು ವರ್ತಕರ ನಡುವೆ ನೇರ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವೀರಭದ್ರಯ್ಯ, ಚಿದಾನಂದ ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸೇರಿದಂತೆ ಇತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *