ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ: ಹೆಚ್‍ಡಿಕೆ

Public TV
2 Min Read

– ಜಾರಕಿಹೊಳಿಗೆ ಈಗ ರಿಯಲೈಸ್ ಆಗಿರಬೇಕು
– ವಿಶ್ವನಾಥ್, ಎಸ್.ಟಿ ಸೋಮಶೇಖರ್ ವಿರುದ್ಧ ವ್ಯಂಗ್ಯ

ಮೈಸೂರು: ಸಿಡಿ ಕೇಸ್ ಎಸ್‍ಐಟಿ ತನಿಖೆಗೆ ಒಪ್ಪಿಸಿರುವುದು ತಿಪ್ಪೆ ಸಾರಿಸುವ ಕೆಲಸ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ, ಇದೀಗ ಇಂತಹ ಅದೆಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬೇಡಿ. ಇಂತಹ ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ. ಇಂತಹ ಪ್ರಕರಣ ತಂದವರಿಗೆ ಬುದ್ಧಿ ಹೇಳಿ ಕಳುಹಿಸಿದ್ದೇವೆ ಎಂದರು.

ಇಂತಹ ಪ್ರಕರಣಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಅದರಿಂದ ಜನರಿಗೆ ಏನು ಸಂದೇಶ ಕೊಡಲು ಸಾಧ್ಯ?. ರಮೇಶ್ ಜಾರಕಿಹೊಳಿಯವರಿಗೆ ಈಗ ಮನವರಿಕೆ ಆಗಿರಬಹುದು. ಕುಮಾರಸ್ವಾಮಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ಅಂತ ರಿಯಲೈಸ್ ಆಗಿರಬೇಕು ಎಂದು ಹೆಚ್‍ಡಿಕೆ ಅಭಿಪ್ರಾಯಪಟ್ಟರು.

ಇದೇ ವೇಳೆ ಹೆಚ್.ವಿಶ್ವನಾಥ್ ಕುರಿತು ವ್ಯಂಗ್ಯವಾಡಿದ ಹೆಚ್‍ಡಿಕೆ, ಯಾರ್ಯಾರ ಸಿಡಿ ಇದೆಯೋ ಇಲ್ವೋ ನನಗೇನು ಗೊತ್ತು. ಆ ಯತ್ನಾಳ್ ಹೇಳ್ತಾರೆ ಇನ್ನೂ 26 ಜನರ ಸಿಡಿ ಇದೆ ಅಂತ. 6 ಮಹಾನುಭಾವರು ಕೋರ್ಟಿಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯ್ತು. ಸಚಿವರಾದವರು ನಮ್ಮ ತೇಜೋವಧೆ ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳಬಹುದಿತ್ತು. ಆದರೆ ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಅಂತ ಕೋರಿದ್ದಾರೆ. ಈ ವಿಚಾರವನ್ನು ವಕೀಲರಿಂದ ಕೇಳಿ ಆಶ್ವರ್ಯವಾಯ್ತು ಎಂದು ಹೇಳಿದರು.

ಆರು ಮಹಾನುಭಾವರು ತಮಗೆ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಎಂದು ಹೆಚ್‍ಡಿಕೆ ಪ್ರಶ್ನಿಸಿದರು.

ಸಿಡಿ ವಿಚಾರವನ್ನ ಎಸ್‍ಐಟಿಗೆ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಸಿ, ಇದೊಂದು ತಿಪ್ಪೆ ಸಾರಿಸುವ ತನಿಖೆ ಆಗಲಿದೆ. ಯಾರ ಮೇಲೆ ತನಿಖೆ ಮಾಡ್ತೀರಾ ಹೇಳಿ. ಇಂತಹ ತನಿಖಾ ಸಂಸ್ಥೆಗಳಿಂದ ಸ್ವಾತಂತ್ರ್ಯದ ನಂತರ ಯಾರಿಗೆ ಶಿಕ್ಷೆಯಾಗಿದೆ. ಹಾಗೇನಾದ್ರು ಶಿಕ್ಷೆ ಆಗಿದ್ರೆ ಅದು ಅಮಾಯಕರಿಗೆ ಆಗಿದೆ ಅಷ್ಟೆ ಎಂದರು.

ಸಿಡಿ ಕೇಸಿನಲ್ಲಿ ಕೈವಾಡ ವಿಚಾರದ ಸಂಬಂಧ ಮಾತನಾಡಿ, ಅವರು ಕಾಂಗ್ರೆಸ್ಸಿನಲ್ಲೇ ಇದ್ದವರಲ್ಲವೇ..? ಆ ಪಕ್ಷದಿಂದ ಅವರು ಹೊರಗೆ ಬಂದಿದ್ದಾರೆ. ಇದನ್ನ ಯಾರು ಸಿಡಿ ಮಾಡಿದ್ದಾರೆಂದು ಹೇಳಿದ್ದಾರೋ ಅವರಿಗೆ ಕೇಳಿ. ಅವರಿಗೆ ಆ ಬಗ್ಗೆ ಚೆನ್ನಾಗಿ ಗೊತ್ತಿರಬೇಕು. ನನಗಂತು ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಸಚಿವ ಎಸ್‍ಟಿ ಸೋಮಶೇಖರ್ ಹೇಳಿಕೆಗೆ ಹೆಚ್ಡಿಕೆ ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *