ಅಗ್ಗ, ಸುರಕ್ಷಿತ ಲಸಿಕೆ – ಇಡೀ ವಿಶ್ವವೇ ಭಾರತವನ್ನು ಗಮನಿಸುತ್ತಿದೆ: ಮೋದಿ

Public TV
2 Min Read

– ಮುಂದಿನ ಕೆಲ ವಾರದಲ್ಲಿ ಲಸಿಕೆ ಲಭ್ಯ
– ದರದ ಬಗ್ಗೆ ಕೇಂದ್ರ, ರಾಜ್ಯ ಚರ್ಚೆ

ನವದೆಹಲಿ: ಕೊರೊನಾ ವೈರಸ್ ಲಸಿಕೆ ಕೆಲವೇ ವಾರಗಳಲ್ಲಿ ಸಿದ್ಧವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಡುಗಡೆಯಾಗಲಿರುವ ವ್ಯಾಕ್ಸಿನ್ ಮೊದಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು ಮತ್ತು ಗಂಭೀರ ಪರಿಸ್ಥಿತಿಗಳಿಂದ ಬಳಲುತ್ತಿರುವ ವೃದ್ಧರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ದೇಶದಲ್ಲಿ ಸದ್ಯದ ಕೊರೊನಾ ಪರಿಸ್ಥಿತಿ ಮತ್ತು ವ್ಯಾಕ್ಸಿನ್ ಪ್ರಯೋಗಗಳ ಸಂಬಂಧ ಚರ್ಚಿಸಲು ವಿಪಕ್ಷಗಳ ಸಭೆ ಕರೆಯಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ದೇಶದಲ್ಲಿ ಸದ್ಯ ಎಂಟು ಲಸಿಕೆಗಳು ಹಲವು ಹಂತದ ಪ್ರಯೋಗದಲ್ಲಿವೆ, ಅವುಗಳ ಉತ್ಪಾದನಾ ಭರವಸೆ ಭಾರತದಲ್ಲಿದೆ. ಭಾರತದಿಂದ ಮೂರು ಲಸಿಕೆಗಳು ವಿಭಿನ್ನ ಹಂತದ ಪ್ರಯೋಗದಲ್ಲಿದೆ. ಕೊರೊನಾ ಲಸಿಕೆಗಾಗಿ ಹೆಚ್ಚು ಕಾಯುವ ಅವಶ್ಯಕತೆ ಇಲ್ಲ. ಕೆಲವೇ ವಾರಗಳಲ್ಲಿ ಅದು ಲಭ್ಯವಾಗಬಹುದು ಎಂದರು.

ಲಸಿಕೆ ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ, ಭಾರತವು ಲಸಿಕೆ ವಿತರಣೆ ಮತ್ತು ಸಾಮಥ್ರ್ಯದ ಪರಿಣತಿಯನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ವಿಜ್ಞಾನಿಗಳು ಕೊರೊನಾ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ಜಗತ್ತು ನಿಗಾ ಇಡುತ್ತಿದೆ. ಅದಕ್ಕಾಗಿಯೇ ಜಗತ್ತು ಭಾರತವನ್ನು ನೋಡುತ್ತಿದೆ ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್ ಕಾರ್ಯಕ್ರಮಗಳಲ್ಲಿ ಅನುಭವ ಹೊಂದಿರುವ ಅತಿದೊಡ್ಡ ನೆಟ್‍ವರ್ಕ್‍ಗಳನ್ನು ನಾವು ಹೊಂದಿದ್ದೇವೆ. ರಾಜ್ಯ ಸರ್ಕಾರಗಳ ಸಹಾಯದಿಂದ, ಅಗತ್ಯವಿರುವ ಇತರ ಕೋಲ್ಡ್-ಚೈನ್ ಸ್ಟೋರೇಜ್‍ಗಳು ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಅಳೆಯಲಾಗುತ್ತಿದೆ. ಲಸಿಕೆ ದಾಸ್ತಾನು ಮತ್ತು ನೈಜ ಸಮಯದ ಮಾಹಿತಿಗಾಗಿ ವಿಶೇಷ ಸಾಫ್ಟ್ ವೇರ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ಮೋದಿ ಹೇಳಿದರು.

ಕೊರೊನಾ ಲಸಿಕೆ ಬೆಲೆ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೂ ಆದ್ಯತೆ:
ಲಸಿಕೆ ಬೆಲೆಯ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ, ಸಾರ್ವಜನಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿಟ್ಟುಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು, ರಾಜ್ಯ ಸರ್ಕಾರಗಳು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಪ್ರಧಾನಿ ಹೇಳಿದರು.

ವ್ಯಾಕ್ಸಿನೇಷನ್ ಸಮಯದಲ್ಲಿ ರಾಷ್ಟ್ರ ವಿರೋಧಿ ಮತ್ತು ಮಾನವ ವಿರೋಧಿ ವದಂತಿಗಳು ಹರಡದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ವ್ಯಾಕ್ಸಿನೇಷನ್ ಸಮಯದಲ್ಲಿ ವದಂತಿಗಳು ಹರಡದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದರು. ಅಲ್ಲದೆ ವ್ಯಾಕ್ಸಿನ್ ಸಂಬಂಧ ಸಲಹೆಗಳನ್ನು ನೀಡುವಂತೆ ಕೇಳಿರುವ ಪ್ರಧಾನಿ ಮೋದಿ ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದರು.

ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದವರು ಯಾರು?
ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಪ್ರಮುಖ ಪಕ್ಷಗಳ ಮುಖಂಡರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಪರವಾಗಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಎನ್‍ಸಿಪಿಯ ಶರದ್ ಪವಾರ್, ಟಿಆರ್‍ಎಸ್‍ನ ನಾಮ ನಾಗೇಶ್ವರ ರಾವ್ ಮತ್ತು ಶಿವಸೇನೆಯ ವಿನಾಯಕ ರೌತ್ ಆಯಾ ಪಕ್ಷಗಳನ್ನು ಪ್ರತಿನಿಧಿಸಿದ್ದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಅದೇ ಸಚಿವಾಲಯದ ರಾಜ್ಯ ಸಚಿವರು ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *