ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

Public TV
2 Min Read

– ಸಾವಿರಾರು ಕೋಟಿ ಮೌಲ್ಯದ ಮೌಲ್ಯದ ಭೂ ಕಬಳಿಕೆ ಆರೋಪ
– ಈ ಹಿಂದೆ ವಿರೋಧಿಸಿದ್ದ ಯೋಜನೆಗೆ ಬಿಜೆಪಿ ಮುಂದಾಗಿದ್ದೇಕೆ?

ಬೆಂಗಳೂರು: ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ರವರು ಅಕ್ರಮವಾಗಿ ಹಣ ಮಾಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇದ್ದಾರೆ. ಈಗ ಏಳು ಬಿಡಿಎ ಕಾಂಪ್ಲೆಕ್ಸ್ ಗಳ ಮರು ನಿರ್ಮಾಣ ಮಾಡುವ ಉದ್ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದೇ ಆಗಿದೆ. ಇಂದಿರಾನಗರ, ಆಸ್ಟಿನ್ ಟೌನ್, ವಿಜಯನಗರ, ಸದಾಶಿವನಗರ ,ದೊಮ್ಮಲೂರು, ಎಚ್.ಎಸ್. ಆರ್ ಬಡಾವಣೆ ಸೇರಿದಂತೆ ಸೇರಿದಂತೆ ಯಾವುದೇ ಕಾರಣಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್ ಗಳನ್ನು ಒಡೆಯಲು ಹಾಗೂ ಅವು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಕೂಡ ಇದೇ ಯೋಜನೆಗೆ ಕೈಹಾಕಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಆಗ ವಿರೋಧಿಸಿದ್ದ ಬಿಜೆಪಿಯವರೇ ಈಗ ಮರುನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ತೆಗೆದುಕೊಳ್ಳುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಬಿಡಿಎ ಕಾಂಪ್ಲೆಕ್ಸ್‍ಗಳು ಅಮೂಲ್ಯ ಸರ್ಕಾರಿ ಸ್ವತ್ತುಗಳು. ಮರುನಿರ್ಮಾಣದ ಹೆಸರಿನಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಮೌಲ್ಯದ ಅವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಖಾಸಗಿಯವರಿಂದ ಬಿಡಿಎ ಅಧ್ಯಕ್ಷರಿಗೆ ಭಾರೀ ಪ್ರಮಾಣದ ಕಿಕ್‍ಬ್ಯಾಕ್ ಸಿಗಲಿದೆ. ಈಗ 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಬಿಟ್ಟುಕೊಟ್ಟು, ನಂತರ ಅದನ್ನು ಮತ್ತೆ 30 ವರ್ಷ ವಿಸ್ತರಿಸಲೂ ಅವಕಾಶ ನೀಡಲಾಗುತ್ತಿದೆ. ಆದರೆ 60 ವರ್ಷಗಳ ಬಳಿಕವೂ ಅವು ಸರ್ಕಾರದ ಸುಪರ್ದಿಗೆ ಮರಳುವುದಿಲ್ಲ. ದಿವ್ಯಶ್ರೀ ಚೇಂಬರ್ಸ್, ಚಿಕ್ಕಪೇಟೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್, ಗಾಂಧಿನಗರದಲ್ಲಿರುವ ಗುಪ್ತಾ ಮಾರುಕಟ್ಟೆಯು ಈಗಾಗಲೇ ಖಾಸಗಿಯವರ ಪಾಲಾಗಿದ್ದು, ಇವುಗಳನ್ನು ವಾಪಸ್ ಪಡೆಯಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಎಂದು ಮೋಹನ್ ದಾಸರಿ ಹೇಳಿದರು.

ಯೋಜನೆಯ ಗುತ್ತಿಗೆ ಪಡೆದಿರುವ ಎಂಬೆಸ್ಸಿ, ಮೇವರಿಕ್ ಹಾಗೂ ಎಂ-ಫಾರ್ ಸಂಸ್ಥೆಗಳೊಂದಿಗೆ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್‍ಗೆ ಲಿಂಕ್ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಕಂಪನಿಯು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಉದಯ್ ಗರುಡಾಚಾರ್ ರವರ ಮೇವರಿಕ್ ಹಾಗೂ ಎಂ-ಫಾರ್ ಕಂಪನಿಗಳೊಂದಿಗೆ ಹಿಂದೆಯೂ ಅನೇಕ ಪ್ರಾಜೆಕ್ಟ್ ಗಳಲ್ಲಿ ಪಾಲುದಾರಿಕೆ ಹೊಂದಿತ್ತು. ಈಗಾಗಲೇ ಬಿಬಿಎಂಪಿ ಆಸ್ತಿಯಾಗಿದ್ದ ಎಂಜಿ ರಸ್ತೆಯ ಗರುಡಾಮಾಲ್ ಇವರುಗಳ ಪಾಲಾಗಿದೆ.

ಪಿಪಿಪಿ ಮಾದರಿಯಲ್ಲಿ ಮರುನಿರ್ಮಾಣ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಮಾಡುತ್ತಿರುವ ಗೋಲ್‍ಮಾಲ್ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್- ಬಿಜೆಪಿ ಪಕ್ಷಗಳ ಪ್ರಭಾವಿ ನಾಯಕರುಗಳ ಒಡೆತನದ ಬಿಲ್ಡರ್ ಕಂಪೆನಿಗಳಿಗೆ ಬೆಂಗಳೂರಿನ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾರಾಸಗಟಾಗಿ ನುಂಗಲು ಹೊರಟಿರುವುದು ಬೆಂಗಳೂರಿಗರ ಪಾಲಿಗೆ ದುರ್ದೈವದ ಸಂಗತಿ.ಸಾರ್ವಜನಿಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಈ ನಿರ್ಧಾರದಿಂದ ತಕ್ಷಣವೇ ಹಿಂದೆಸರಿಯದಿದ್ದರೆ ಆಮ್ ಆದ್ಮಿ ಪಾರ್ಟಿ ಭಾರೀ ಪ್ರತಿಭಟನೆ ಮಾಡಲಿದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಯಚೂರು ನಗರಸಭೆಯಲ್ಲಿ ತಿಂಗಳ ಮಾಮೂಲಿ ಜಗಳ-ಅಧ್ಯಕ್ಷನ ವಿರುದ್ಧ ಜೀವಬೆದರಿಕೆ ದೂರು

Share This Article
Leave a Comment

Leave a Reply

Your email address will not be published. Required fields are marked *