ಅಕ್ರಮ ಮದ್ಯ ಮಾರಾಟ ನಿಲ್ಲಿಸಿ – ಮಹಿಳೆಯರಿಂದ ಅನಿರ್ಧಿಷ್ಟಾವಧಿ ಹೋರಾಟ

Public TV
1 Min Read

– ಸಿಎಂ ಜೊತೆ ಚರ್ಚೆಗೆ ಸಮಯ ನಿಗದಿ ಮಾಡಲು ಮಹಿಳೆಯರ ಪಟ್ಟು

ರಾಯಚೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ನಗರದಲ್ಲಿ ಮಹಿಳೆಯರು ನಡೆಸಿರುವ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆದಿದೆ.

ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಹೋರಾಟ ನಡೆಸಿರುವ ಮಹಿಳೆಯರು ಜಿಲ್ಲಾ ಕ್ರೀಡಾಂಗಣ ಬಳಿಯ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮುಂದುವರೆಸಿದ್ದಾರೆ. ಮಹಿಳೆಯರ ಜೊತೆಗೆ ಬಂದ ಅವರ ಚಿಕ್ಕಪುಟ್ಟ ಮಕ್ಕಳು ಸಹ ಹೋರಾಟದಲ್ಲಿ ಜೊತೆಯಾಗಿದ್ದಾರೆ.

ಮಹಿಳೆಯರ ಹೋರಾಟಕ್ಕೆ ಮಣಿದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಈಗಾಗಲೇ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ನಿರಂತರವಾಗಿ ದಾಳಿ ನಡೆಸಿ ಅಕ್ರಮ ತಡೆಯಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಹೋರಾಟಗಾರರು ಜಿಲ್ಲಾಧಿಕಾರಿಗಳ ಭೇಟಿ ಸಮಾಧಾನಗೊಳ್ಳದೆ ಹೋರಾಟ ಮುಂದುವರೆಸಿದ್ದಾರೆ. ಮದ್ಯ ನಿಷೇಧ ಕುರಿತು ಚರ್ಚೆಗೆ ಮುಖ್ಯಮಂತ್ರಿ ಸಮಯ ನಿಗದಿ ಮಾಡಲು ಆಗ್ರಹಿಸಿ ಹೋರಾಟವನ್ನ ಮಹಿಳೆಯರು ಮುಂದುವರೆಸಿದ್ದಾರೆ.

ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಮಹಿಳೆಯರು ಭಾಗವಹಿಸಿದ್ದಾರೆ. ಬೇಡಿಕೆಗೆ ಸ್ಪಂದನೆ ಸಿಗುವವರೆಗೂ ಅನಿರ್ಧಿಷ್ಟಾವಧಿ ಹೋರಾಟ ನಡೆಸುವುದಾಗಿ ಮಹಿಳೆಯರು ಎಚ್ಚರಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆದು ಉಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸುವಂತೆ ಆಗ್ರಹಿಸಿದ್ದಾರೆ.

ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಹೋರಾಟ ನಡೆಸಿದ ಮಹಿಳೆಯರು ರಾತ್ರಿ ವೇಳೆ ಮಲಗಲು ಸ್ಥಳವಿಲ್ಲದೆ ಪರದಾಡಿದ್ದಾರೆ. ಜಿಲ್ಲಾ ಕ್ರೀಡಾಂಗಣ ಬಳಿಯ ಗಾಂಧಿ ಪ್ರತಿಮೆ ಪಕ್ಕದಲ್ಲೇ ಮಲಗಲು ಅವಕಾಶ ಕೊಡುವಂತೆ ಪೊಲೀಸರಿಗೆ ಒತ್ತಾಯಿಸಿದರು. ಪೊಲೀಸರು ಹಾಗೂ ಹೋರಾಟ ನಿರತ ಮಹಿಳೆಯರ ಜೊತೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೊನೆಗೆ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿದ ಪೊಲೀಸರು ಗಾಂಧಿ ಪ್ರತಿಮೆ ಬಳಿ ಮಲಗಲು ಅವಕಾಶ ನೀಡಿದರು. ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿರುವ ಮಹಿಳೆಯರು ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *