ಅಕ್ರಮ ಕಲ್ಲು ಗಣಿಗಾರಿಕೆಗೆ ಹೆಚ್‍ಡಿಕೆಯೇ ಪ್ರಮುಖ ರೂವಾರಿ: ಎಎಪಿ ಆರೋಪ

Public TV
2 Min Read

ಬೆಂಗಳೂರು: ರಾಜ್ಯದ ಹಳೇ ಮೈಸೂರು ಭಾಗದ ವಿವಿಧೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರವು ಇದಕ್ಕೆ ಬೆಂಬಲವಾಗಿ ನಿಂತಿದೆ ಎಂದು ಇಂದಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದರು.

ಕೆಆರ್‍ಎಸ್ ನಿರ್ಮಾಣದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮುಂತಾದ ಮಹನೀಯರ ಶ್ರಮವಿದೆ. ಲಕ್ಷ ಎಕರೆಗೂ ಅಧಿಕ ಭೂಮಿಗೆ ಕೆಆರ್‍ಎಸ್ ನೀರುಣಿಸುತ್ತಿದೆ. ಕೆಆರ್‍ಎಸ್ ಸಮೀಪ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರಿಂದ ಅಣೆಕಟ್ಟೆ ಒಡೆದು ಹೋದರೆ ಭಾರೀ ಅನಾಹುತ ಸಂಭವಿಸಲಿದೆ. ಇದನ್ನು ಅರ್ಥ ಮಾಡಿಕೊಳ್ಳದ ಕುಮಾರಸ್ವಾಮಿಯವರು ಅಕ್ರಮದ ವಿರುದ್ಧ ಧ್ವನಿ ಎತ್ತಿರುವ ಸುಮಲತಾ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಾಚಿಕೆಗೇಡು.

ಕೆಆರ್‍ಎಸ್‍ನಿಂದ ಕೇವಲ ಹತ್ತು ಕಿಮೀ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಸದ್ಯ 80ಕ್ಕೂ ಹೆಚ್ಚು ಕ್ರಷರ್ ಗಳಿದ್ದು, ಈ ಪೈಕಿ 50 ಕ್ರಷರ್ ಅನಧಿಕೃತ. ಹಂಗರಹಳ್ಳಿಯಿಂದ ಪ್ರತಿದಿನ 500ಕ್ಕೂ ಹೆಚ್ಚು ಲಾರಿಗಳಲ್ಲಿ ಕಲ್ಲುಗಳು ಹೋಗುತ್ತಿವೆ. ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಅನೇಕ ಮುಖಂಡರು ಶಾಮೀಲಾಗಿದ್ದಾರೆ. ದಂಧೆಯ ಪ್ರಮುಖ ರೂವಾರಿಯಾಗಿ ಕುಮಾರಸ್ವಾಮಿ ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಸಹಾಯಕರಾಗಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪುಟ್ಟರಾಜು ಇದ್ದಾರೆ ಎಂದು ಜಗದೀಶ್ ವಿ .ಸದಂ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪಕ್ಷದ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ನಂಜಪ್ಪ ಕಾಳೇಗೌಡ ರವರು ಮಾತನಾಡಿ ಬೆಂಗಳೂರು ಗ್ರಾಮಾಂತರ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಮೈಸೂರು, ಕನಕಪುರ ಭಾಗಗಳಲ್ಲಿ ರಾಜ್ಯದ ನೈಸರ್ಗಿಕ ಸಂಪತ್ತು ಅವ್ಯಾಹತವಾಗಿ ಲೂಟಿಯಾಗುತ್ತಿದ್ದು, ಸರ್ಕಾರದ ಬೊಕ್ಕಸ ಸೇರಬೇಕಾಗಿದ್ದ ಸಾವಿರಾರು ಕೋಟಿ ರೂಪಾಯಿ ರಾಜಸ್ವ ಧನವು ರಾಜಕಾರಣಿಗಳು ಹಾಗೂ ಉದ್ಯಮಿಗಳ ಪಾಲಾಗುತ್ತಿದೆ. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

ಈ ಹಿಂದೆ ಎಎಪಿಯ ತಂಡವು ಸ್ವತಃ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ನಮ್ಮ ಒತ್ತಡಕ್ಕೆ ಮಣಿದು ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಗೆ ಸರ್ಕಾರ ತಕ್ಷಣವೇ ಬ್ರೇಕ್ ಹಾಕಿತ್ತು. ಆದರೆ ಕೆಲ ದಿನಗಳ ನಂತರ ಮತ್ತೆ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ನಾವು ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಕ್ರಮಕ್ಕೆ ಸಹಕಾರ ನೀಡುತ್ತಾ ಆಡಳಿತ ನಡೆಸುವ ಬದಲು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ, ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

Share This Article
Leave a Comment

Leave a Reply

Your email address will not be published. Required fields are marked *