ಅಂಫಾನ್ ಚಂಡಮಾರುತ – ಭಾರಿ ಮಳೆ, ಬಿರುಗಾಳಿಗೆ ಒಡಿಶಾ, ಬಂಗಾಳ ತತ್ತರ

Public TV
1 Min Read

ನವದೆಹಲಿ: ಬಂಗಾಳ ಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಅಂಫಾನ್ ಚಂಡಮಾರುತವು ಕಡಲ ತೀರವನ್ನು ಅಪ್ಪಳಿಸಲು 150 ಕಿಮೀ ವೇಗದಲ್ಲಿ ಲಗ್ಗೆ ಇಡುತ್ತಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಭಾರೀ ಮಳೆ, ಬಿರುಗಾಳಿ ಆರ್ಭಟ ಜೋರಾಗಿದ್ದು, ಇಂದು ಪಶ್ಚಿಮ ಬಂಗಾಳದ ಡೀಘಾ ಬಳಿ ಚಂಡಮಾರುತ ಕಾಲಿಡುವ ಸಾಧ್ಯತೆ ಇದ್ದು, ಒಡಿಶಾದ ಭದ್ರಾಕ್ ಪ್ರದೇಶದಲ್ಲಿ ಬುಧವಾರ ಗುಡುಗು ಸರಿತ ಭಾರಿ ಮಳೆ ಆಗಲಿದ್ದು, ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4 ಗಂಟೆಯಿಂದಲೇ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಸಮುದ್ರ ತೀರ ಪ್ರದೇಶದಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 45 ತಂಡಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಿಯೋಜನೆ ಮಾಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಆದರೆ ಕೊರೋನಾ ವೈರಸ್ ಭೀತಿ ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟವಾಗಿದ್ದು, ದೇಶದ ವಿವಿಧೆಡೆಯಿಂದ ವಾಪಸ್ಸಾದ ವಲಸೆ ಕಾರ್ಮಿಕರನ್ನು ಪ್ರವಾಹ ಕೇಂದ್ರಗಳಲ್ಲೇ ಕ್ವಾರಂಟೈನ್‍ಗೆ ಮಾಡಲಾಗಿದೆ. ಸದ್ಯ ಚಂಡಮಾರುತ ಬಾಧಿತ ಪ್ರದೇಶಗಳಲ್ಲಿನ ಜನರನ್ನು ಶಾಲೆ, ಹಾಸ್ಟೆಲ್ ಮತ್ತಿತರ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಅಂಫಾನ್ ಚಂಡಮಾರುತದ ಬಿರುಗಾಳಿಯ ವೇಗವು 155-165 ಆಗಿದ್ದು ಭಾರಿ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಅಪಾಯವಿದೆ. ಕೆಲ ಕರಾವಳಿ ಪ್ರದೇಶಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ನಿರ್ಮಾಣವಾಗುತ್ತಿವೆ. ಕೆಲ ಮಟ್ಟದ ಪ್ರದೇಶಗಳಿಗೆ ಸಮುದ್ರ ನೀರು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *