ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ – ಯುಜಿಸಿ ವಾದ ಎತ್ತಿಹಿಡಿದ ಸುಪ್ರೀಂಕೋರ್ಟ್

Public TV
2 Min Read

ನವದೆಹಲಿ : ವಿಶ್ವವಿದ್ಯಾನಿಲಯಗಳು ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ‌ ನಿರ್ಧಾರವನ್ನು ಸುಪ್ರೀಂಕೋರ್ಟ್ ಪುನರ್ ಉಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಅಂತಿಮ ವರ್ಷದ ಪದವಿ ಪರೀಕ್ಷೆಗಳ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾ. ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ವರ್ಷ ಪರೀಕ್ಷೆಗಳು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.

ಸೆಪ್ಟೆಂಬರ್ 30ರೊಳಗೆ ಅಂತಿಮ ವರ್ಷದಲ್ಲಿರುವ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಪೂರ್ಣಗೊಳಿಸಲು ಯುಜಿಸಿ ಸೂಚನೆ ನೀಡಿದೆ. ಆದರೆ ಇದು ಸಾಧ್ಯವಾಗದಿದ್ದರೇ ಈ ಡೆಡ್‌ಲೈನ್ ಬದಲಿಸಲು ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಯುಜಿಸಿಗೆ ಮನವಿ ಮಾಡಿಕೊಳ್ಳಬಹುದು. ಆದೆರೆ ಪರೀಕ್ಷೆ ನಡೆಸುವುದೇ ಬೇಡ ಎನ್ನುವುದು ಸಮಂಜಸವಲ್ಲ ಎಂದಿದೆ.

ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಖ್ಯ, ಪರೀಕ್ಷೆಗಳಿಗೆ ಉತ್ತೀರ್ಣ ಮಾಡುವ ಕ್ರಮವನ್ನು ನಾವು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬಾರದು. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂದು ಆದೇಶ ನೀಡಿದೆ.

ಹಿಂದಿನ ವಿಚಾರಣೆ ವೇಳೆ ಯುಜಿಸಿ, ಪದವಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಪರೀಕ್ಷೆಗಳು, ನಾವು ಅದನ್ನು ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಮಾಡುತ್ತಿದ್ದು ಮೊದಲ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಮೇಲೆ ಫಲಿತಾಂಶ ನೀಡಲಾಗುತ್ತಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

ಯುಜಿಸಿ ಪರೀಕ್ಷೆಗಳಿಲ್ಲದೇ ಅಂತಿಮ ವರ್ಷದ ಫಲಿತಾಂಶ ನೀಡುವ ಬಗ್ಗೆ ಸಜ್ಜುಗೊಂಡಿಲ್ಲ‌ ಪರೀಕ್ಷೆ ನಡೆಸುವುದು ಉತ್ತಮ ಎಂದು ಯುಜಿಸಿ ವಾದವನ್ನು ಕೇಂದ್ರ ಸರ್ಕಾರ ಪರ ವಕೀಲರು ಬೆಂಬಲಿಸಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಡೆಸುವುದು ಅಪಾಯಕಾರಿ. ವಿದ್ಯಾರ್ಥಿಯ ಹಿಂದಿನ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನ ಆಧರಿಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ನೀಡಲು ಹಲವು ರಾಜ್ಯ ಸರ್ಕಾರಗಳು, ಪೋಷಕರ ಒಕ್ಕೂಟ ಹಾಗೂ ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು.

ಸುಪ್ರೀಂಕೋರ್ಟ್ ಈ ಮಹತ್ವ ತೀರ್ಪುನಿಂದ ಯುಜಿಸಿ ಹಳೆ ಆದೇಶದಂತೆ ಸೆಪ್ಟೆಂಬರ್ 30ರೊಳಗೆ ಪರೀಕ್ಷೆ ನಡೆಯಲಿದ್ದು ಪದವಿ, ಪಿಜಿ, ಡಿಪ್ಲೊಮಾ, ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *