ಅಂತರ್ ಜಿಲ್ಲಾ ಖದೀಮರ ಬಂಧನ- 1 ಕೋಟಿಗೂ ಅಧಿಕ ಮೌಲ್ಯದ ವಾಹನಗಳು ವಶಕ್ಕೆ

Public TV
2 Min Read

ಹಾಸನ: ಜಿಲ್ಲೆಯ ಹಳೇಬೀಡು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರು ಮಂದಿ ಅಂತರ್ ಜಿಲ್ಲಾ ವಾಹನ ಖದೀಮರನ್ನು ಬಂಧಿಸಿದ್ದಾರೆ. ಸುಮಾರು 1.50 ಕೋಟಿ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ತಿಳಿಸಿದರು.

ಬಂಧಿತರೆಲ್ಲ 20-25ರ ವಯಸ್ಸಿನ ನಡುವಿನ ಯುವಕರಾಗಿದ್ದು, ಎಲ್ಲರೂ ಶಿವಮೊಗ್ಗ ಜಿಲ್ಲೆಯ ಸೊರಬ, ಮಂಗಳೂರು, ಗುಲ್ಬರ್ಗ ಜಿಲ್ಲೆಯರಾಗಿದ್ದಾರೆ. ಈ ಹಿಂದೆ ಎಲ್ಲರೂ ಸಣ್ಣಪುಟ್ಟ ಕಳ್ಳತನ ನಡೆಸಿದ್ದರು. ಕೃತ್ಯ ಸಂಬಂಧ ಶಾಹಿದ್, ಹಿದಾಯತ್, ಬಾಸ್ಕರ್ ಪೂಜಾರಿ, ಅಬ್ದುಲ್ ಕಲಾಂ, ಅಬ್ದುಲ್ ರಹೀಂ, ಖಾಜಾ ಮಹಮದ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 1 ಕೋಟಿಗೂ ಅಧಿಕ ಬೆಲೆಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, 10 ಅಶೋಕ್ ಲೈಲ್ಯಾಂಡ್‍ನ ದೋಸ್ತ್, ಎರಡು ಲಾರಿ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಪಿಕ್ ಅಪ್, ಆರ್‍ಎಕ್ಸ್-100 ಬೈಕ್, ಒಂದು ಹೋಂಡಾ ಡಿಯೋ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮೂರು, ಹಾಸನ ಜಿಲ್ಲೆಯಲ್ಲಿ ಎರಡು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ತುಮಕೂರು, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ತಲಾ ಒಂದು ವಾಹನ ಕಳವು ಮಾಡಿದ್ದರು ಎಂದು ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.

ಕೊರೊನಾ- ಫೈನಾನ್ಸ್ ಕಾರಣ ನೀಡಿ ಮಾರಾಟ:
ಕೊರೊನಾ ಹಿನ್ನೆಲೆ ಫೈನಾನ್ಸ್ ಪೂರ್ಣ ಪಾವತಿಯಾಗಿಲ್ಲ ಎಂದು ಕಾರಣ ನೀಡಿ ಕದ್ದ ವಾಹನವನ್ನು ಮಾರಾಟ ಮಾಡುತ್ತಿದ್ದ ಖದೀಮರು, ಸುಮಾರು 15ಕ್ಕೂ ಹೆಚ್ಚು ವಾಹನವನ್ನು ಮಾರಾಟಮಾಡಿದ್ದಾರೆ. ಇವರ ಹಿಂದೆ ವಾಹನ ಕದಿಯುವ ಹಾಗೂ ಮಾರಾಟಮಾಡುವ ದೊಡ್ಡ ಜಾಲವೇ ಸಕ್ರೀಯವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಆಸೆಗೆ ಬಿದ್ದು ಕೈಸುಟ್ಟುಕೊಂಡರು:
ಖದೀಮರು ಗ್ರಾಹಕರನ್ನು ಪುಸಲಾಯಿಸಿ 10 ಲಕ್ಷದ ವಾಹನವನ್ನು ಕೇವಲ 2-3 ಲಕ್ಷಕ್ಕೆ ನೀಡುತ್ತಿದ್ದರು. ಇಷ್ಟು ಕಡಿಮೆ ಮೊತ್ತಕ್ಕೆ ವಾಹನ ಸಿಗಲಿದೆ ಹಾಗೂ ವಾಹನದ ಮೂಲ ದಾಖಲಾತಿಗಳನ್ನು ಕೊರೊನಾ ಹಾವಳಿ ಮುಗಿದ ಬಳಿಕ ಹಾಗೂ ಫೈನಾನ್ಸ್ ಪೂರ್ಣ ಪಾವತಿ ಬಳಿಕ ಸಿಗಲಿದೆ ಎಂದು ನಂಬಿಸಿ ಎಷ್ಟೋ ಮಂದಿಗೆ ಉಂಡೇನಾಮ ಹಾಕಿದ್ದಾರೆ. ಇದೀಗ ವಾಹನಗಳನ್ನು ಖರೀದಿಸಿದ ಗ್ರಾಹಕರಿಂದ ವಶಕ್ಕೆ ಪಡೆದಿದ್ದು, ಕದ್ದ ಮಾಲು ಖರೀದಿಸಿದವರಿಗೆ ಕೈಸುಟ್ಟಿಕೊಂಡಂತಾಗಿದೆ.

ಅಶೋಕ್ ಲೈಲ್ಯಾಂಡ್ ವಾಹನಗಳೇ ಟಾರ್ಗೆಟ್:
ಪೊಲೀಸರು ಇದೀಗ ವಶಕ್ಕೆ ಪಡೆದ ಬಹುತೇಕ ವಾಹನಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ಸೇರಿದ್ದಾಗಿದೆ. ಇವುಗಳ ಲಾಕ್ ಮುರಿದು ಕದಿಯುತಿದ್ದ ಖದೀಮರು, ಈ ಕಂಪನಿ ವಾಹನ ಮಾರಾಟಕ್ಕೆ ಸೂಕ್ತವಾಗಿರುವುದರಿಂದ ಇದನ್ನೇ ಗುರುತಿಸಿ ಕೃತ್ಯ ನಡೆಸುತ್ತಿದ್ದರು ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *