ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಕಾಮೇಗೌಡರು- ಸಿನಿಮಾ ಆಗಲಿದೆ ಸಾಧನೆ

Public TV
3 Min Read

ಬೆಂಗಳೂರು: ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡರ ಸಾಧನೆ ಮೈ ಜುಮ್ ಎನ್ನಿಸುವಂಥದ್ದು, ಕೆರೆ ತೋಡುವ ಅವರ ಆಸಕ್ತಿ ಅಗಾಧವಾದದ್ದು ಎಂಬುದು ಈಗಾಗಲೇ ತಿಳಿದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮನ್ ಕೀ ಬಾತ್‍ನಲ್ಲಿ 80ರ ಇಳಿ ವಯಸ್ಸಿನ ಕಾಮೇಗೌಡರ ಸಾಧನೆಯನ್ನು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಸಂತಸದ ವಿಚಾರ ಹೊರ ಬಿದ್ದಿದೆ.

ಹೌದು ಸ್ವಾರ್ಥಕ್ಕಾಗಿ ಮರ, ಗಿಡಗಳನ್ನು ಕಡಿದು ಭೂಮಿಯನ್ನು ಬರುಡಾಗಿಸುತ್ತಿರುವವರ ಮಧ್ಯೆ ಕಾಮೇಗೌಡರು ಇಂದಿನ ಯುವ ಪೀಳಿಗೆಗೆ ಮಾದರಿ. ಇವರ ಜೀವನವನ್ನು ಪ್ರತಿಯೊಬ್ಬ ಯುವಕರು ಅರಿಯಬೇಕು, ಸಾಧನೆ ಎಂದರೆ ಕೇವಲ ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳುವುದಲ್ಲ. ಪ್ರಕೃತಿಯನ್ನು ಆರಾಧಿಸುವುದು, ಪ್ರಕೃತಿಯೊಂದಿಗೆ ಬೆರೆಯುವುದು ಎಂಬುದನ್ನು ಕಾಮೇಗೌಡರು ನಿರೂಪಿಸಿದ್ದಾರೆ. ಹೀಗಾಗಿ ಅವರ ಸಾಧನೆಯನ್ನು ತೆರೆ ಮೇಲೆ ತರಲು ಬರಹಗಾರ, ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ನಿರ್ಧರಿಸಿದ್ದಾರೆ.

ಈಗಾಗಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಾಮೇಗೌಡರ ಜೀವನಾಧಾರಿತ ಡಾಕ್ಯೂಮೆಂಟ್ರಿ ಸಿದ್ಧಪಡಿಸಲು ತಯಾರಿ ನಡೆಸಿದ್ದು, ಸಿನಿಮಾದ ಪೋಸ್ಟರ್‍ನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಅವರ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್ ನ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ದಯಾಳ್ ಪದ್ಮನಾಭನ್, ಶ್ರೀ ಕಾಮೇಗೌಡ ಅವರ ಸಾಧನೆಯ ಡಾಕ್ಯೂಮೆಂಟ್ರಿ ನಿರ್ಮಾಣ ಮಾಡುತ್ತಿರುವುದಕ್ಕೆ ಡಿ ಪಿಕ್ಚರ್ಸ್ ಹಾಗೂ ಓಂ ಪ್ರೊಡಕ್ಷನ್ಸ್ ಹೌಸ್ ಹೆಮ್ಮೆ ಹಾಗೂ ಸಂತಸ ಪಡುತ್ತದೆ. ಇದನ್ನು ನಾನೇ ನಿರ್ದೇಶಿಸುತ್ತಿದ್ದೇನೆ. ಕಾಮೇಗೌಡರ ಸಾಧನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ. ಚಿಯರ್ಸ್ ಎಂದು ಬರೆದುಕೊಂಡಿದ್ದಾರೆ.

D PICTURES & OM PRODUCTION HOUSE are proud & glad to produce a Documentary film on Sri.Kamegowda to be Directed by me..!…

Posted by Dayal Padmanabhan on Monday, June 29, 2020

ಅಂದಹಾಗೆ ಸಿನಿಮಾಗೆ ದಿ ಗುಡ್ ಶಫರ್ಡ್(ಉತ್ತಮ ಕುರುಬ) ಎಂಬ ಟೈಟಲ್ ಇಟ್ಟಿದ್ದಾರೆ. ದಯಾಳ್ ಪದ್ಮನಾಭ್ ಅವರ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿದ್ದು, ಉತ್ತಮ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿನಿಮಾ ನೋಡಲು ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ

ದಯಾಳ್ ಪದ್ಮನಾಬ್ ಅವರು ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ಸರ್ಕಸ್, ಘರ್ಷಣೆ, ಹಗ್ಗದ ಕೊನೆಯಂತಹ ಸಿನಿಮಾಗಳ ಕಥೆಯನ್ನು ಬರೆದು ನಿದೇರ್ಶಿಸಿದ್ದಾರೆ. ಅಲ್ಲದೆ ಆ ಕರಾಳ ರಾತ್ರಿ, ಪುಟ 109, ರಂಗನಾಯಕಿ-1 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ 9ನೇ ದಿಕ್ಕು ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದರ ನಡುವೆ ಇದೀಗ ಕಾಮೇಗೌಡರ ಜೀವನಾಧಾರಿತ ಚಿತ್ರವನ್ನು ಮಾಡುವ ಕುರಿತು ಘೋಷಿಸಿದ್ದಾರೆ.

ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಮಂಡ್ಯ ಜಿಲ್ಲೆಯ ಕಾಮೇಗೌಡರ ಸಾಮಾಜಿಕ ಕಳಕಳಿ ಯುವ ಸಮೂಹಕ್ಕೆ ಮಾದರಿಯಾಗಿದೆ. ಹೀಗಾಗಿಯೇ ಪ್ರಧಾನಿ ಮೋದಿ `ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡ ಅವರನ್ನು ಶ್ಲಾಘಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸಮದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡರು 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕಾಮೇಗೌಡರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿರುವ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸವನ್ನು ಗುರುತಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ ಕಾಮೇಗೌಡರು?
ಕುರಿಗಾಹಿಯಾಗಿರುವ ಕಾಮೇಗೌಡರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿ ಪಡೆದಿದ್ದರು. ಆಗ ನಾನು ದಾಹ ತೀರಿಸಿಕೊಂಡೆ ಆದರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನು ಕಂಡು ಆರಂಭದಲ್ಲಿ ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಕಾಮೇಗೌಡರು, ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಸದ್ಯ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಇವರು ತೋಡಿದ ಕೆರೆಗಳಲ್ಲಿ ನೀರು ತುಂಬಿರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *