ಅಂತರರಾಜ್ಯ ವಲಸಿಗರಿಂದ ಹೆಚ್ಚಿದ ಕಂಟಕ-ಗ್ರೀನ್‍ಝೋನ್‍ಗಳಿಗೆ ನುಸುಳಿದ ಕೊರೊನಾ

Public TV
2 Min Read

-ಹಾಸನ, ಕೋಲಾರ, ಯಾದಗಿರಿ, ಕಾಲಿಟ್ಟ ಮಹಾಮಾರಿ

ಬೆಂಗಳೂರು: ಇಷ್ಟು ದಿನ ನೆಮ್ಮದಿಯಿಂದ ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮಹಾಮಾರಿ ಕೊರೊನಾ ಇದೀಗ ಕಾಲಿಟ್ಟಿದೆ. ಮುಂಬೈಯಿಂದ ಹಾಸನಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಿಗೆ ಮತ್ತು ಇನ್ನೋರ್ವನಿಗೆ ಕೊರೊನಾ ಸೋಂಕು ಧೃಢಪಟ್ಟಿದೆ.

ಕರ್ನಾಟಕದಲ್ಲಿ ಲಾಕ್‍ಡೌನ್ ರಿಲೀಫ್ ಕೊಟ್ಟಿದ್ದೇ ಕೊಟ್ಟಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗೋದರ ಜೊತೆಗೆ ಈಗ ಗ್ರೀನ್‍ಝೋನ್‍ಗಳಿಗೂ ಕಂಟಕ ಶುರುವಾಗಿಬಿಟ್ಟಿದೆ. ಹೊರ ರಾಜ್ಯದ ವಲಸಿಗರನ್ನು ಒಳಗೆ ಬಿಟ್ಟುಕೊಂಡಿದ್ದೆ ಬಂದು ಹಸಿರು ವಲಯಗಳ ಬಣ್ಣವೇ ಬದಲಾಗಿ ಹೋಗ್ತಿದೆ. ಮೊನ್ನೆ ಮೊನ್ನೆ ಶಿವಮೊಗ್ಗಕ್ಕೆ ಬಂದಿದ್ದ ಕೊರೊನಾ, ಇವತ್ತು ಮೂರು ಜಿಲ್ಲೆಗಳಿಗೆ ಶಾಕ್ ಕೊಟ್ಟಿದೆ.

ಇಷ್ಟು ದಿನ ಗ್ರೀನ್ ಝೋನ್‍ಗಳಾಗಿದ್ದ ಹಾಸನ, ಕೋಲಾರ ಹಾಗೂ ಯಾದಗಿರಿ ಜಿಲ್ಲೆಗಳಿಗೂ ಇವತ್ತು ಮಹಾಮಾರಿ ಕಾಲಿಟ್ಟಿದೆ. ಹಾಸನ ಜಿಲ್ಲೆಯಲ್ಲಿ ಇಂದು ಒಂದೇ ದಿನ ಐದು ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಆತಂಕ ಸೃಷ್ಟಿಯಾಗಿದೆ. ಸೋಂಕಿತರು ಚನ್ನರಾಯಪಟ್ಟಣ ತಾಲೂಕಿನ ಒಂದೇ ಕುಟುಂಬದವರಾಗಿದ್ದು, ಮೇ 10ರಂದು ಮುಂಬೈನಿಂದ ಬಂದಿದ್ದರು. ಇವರೆಲ್ಲರಿಗೂ ಕೊರೊನಾ ದೃಢವಾಗಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.

ಚಿನ್ನದ ನಾಡು ಕೋಲಾರಕ್ಕೂ ನುಸುಳಿರುವ ಮಹಾಮಾರಿ ಐವರನ್ನ ವಕ್ಕರಿಸಿದೆ. ಸೋಂಕಿತರು ಮುಳಬಾಗಿಲು ತಾಲೂಕು ವ್ಯಾಪ್ತಿಯ ಬೂಸಾಲಕುಂಟೆ, ವಿ.ಹೊಸಹಳ್ಳಿ, ಬೆಳಗಾನಹಳ್ಳಿ ಹಾಗೂ ಬೈರಸಂದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. ಹೋಮ್ ಕ್ವಾರಂಟೇನ್‍ನಲ್ಲಿದ್ದ ಇವರಲ್ಲಿ, ಇಬ್ಬರು ಒರಿಸ್ಸಾಗೆ ಹೋಗಿ ಬಂದ ಲಾರಿ ಚಾಲಕ ಹಾಗೂ ಕ್ಲೀನರ್ ಆದ್ರೆ, ಚೆನ್ನೈ ಮಾರುಕಟ್ಟೆಗೆ ಹೋಗಿ ಬಂದಿರುವ ವ್ಯಕ್ತಿಯೊಬ್ಬರು ಇದ್ದಾರೆ. ಬೆಂಗಳೂರಿನ ಜೆಪಿ ನಗರದಿಂದ ಬಂದಿದ್ದ ಮಹಿಳೆ ಹಾಗೂ ಬೀದರ್- ಹುಮಾನಾಬಾದ್‍ನಿಂದ ಬಂದಿದ್ದ ವಿದ್ಯಾರ್ಥಿನಿ ಸೇರಿ ಐವರು ಕೊರೊನಾ ಪೀಡಿತರಾಗಿದ್ದಾರೆ.

ಯಾದಗಿರಿಯಲ್ಲಿ ಸುರಪುರದ ಗಂಡ-ಹೆಂಡ್ತಿ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಗುಜರಾತ್‍ನಲ್ಲಿ ಛತ್ರಿ ಮಾರಾಟ ಮಾಡುತ್ತಿದ್ದ ಇವರಿಬ್ಬರು ಬಾಗಲಕೋಟೆಗೆ ಬಂದು ಬಳಿಕ ಅಲ್ಲಿಂದ ಯಾದಗಿರಿಗೆ ಬಂದಿದ್ದರು. ಸದ್ಯ ಇವರಿದ್ದ ಅಸರ್ ಮೊಹಲ್ಲಾ ಏರಿಯಾವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲು ಸಿದ್ಧತೆ ಮಾಡಲಾಗಿದೆ.

ಹಾಸನ ಹಾಗೂ ಶಿವಮೊಗ್ಗದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳುತ್ತಿದ್ದಂತೆ ಈ ಎರಡೂ ಜಿಲ್ಲೆಯ ನೆರೆಯ ಪ್ರದೇಶ ಕಾಫಿನಾಡು ಚಿಕ್ಕಮಗಳೂರಿಗರ ನಿದ್ದೆಗೆಡಿಸಿದೆ. ಹೀಗಾಗಿ ಚಿಕಮಗಳೂರು-ಹಾಸನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನ ಮತ್ತೆ ಬಂದ್ ಮಾಡುತ್ತಿದ್ದಾರೆ. ಇವತ್ತು ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಗ್ರಾಮೀಣ ಭಾಗದಿಂದ ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮರಗುಂದ-ದೇವಾಲಕೆರೆಯ ಜಪಾವತಿ ಸೇತುವೆ ಮೇಲೆ ಬೃಹತ್ ಬಂಡೆಕಲ್ಲುಗಳನ್ನ ರಸ್ತೆಗೆ ಅಡ್ಡಲಾಗಿ ಹಾಕಿ ಸಂಚಾರವನ್ನ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *