‘ಎಲ್ಲದ್ದಕ್ಕೂ 7ನೇ ತಾರೀಖಿನವರೆಗೆ ಕಾಯಿರಿ’ – ಮತ್ತೆ ಬೆಂಗ್ಳೂರಿನಲ್ಲಿ ಲಾಕ್‌ಡೌನ್‌ ಜಾರಿ?

Public TV
2 Min Read

ಬೆಂಗಳೂರು: “ಎಲ್ಲದ್ದಕ್ಕೂ 7ನೇ ತಾರೀಖಿನವರೆಗೆ ಕಾಯಿರಿ” ಎಂದು ಸಚಿವ ಅಶೋಕ್‌ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಜಾರಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಕೊರೊನಾ ನಿಯಂತ್ರಣ ಸಂಬಂಧ ವಿಧಾನಸೌಧದಲ್ಲಿ ಇಂದು ಆರ್‌.ಅಶೋಕ್‌ ಮತ್ತು ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ 7ನೇ ತಾರೀಖಿನನವರೆಗೆ ಕಾಯಿರಿ. ನಂತರ ಮುಖ್ಯಮಂತ್ರಿಗಳು ಹಲವಾರು ಬದಲಾವಣೆಗಳನ್ನು ತೆಗೆದುಕೊಳ್ಳಲಿದ್ದಾರೆ. 7ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಆರಂಭಗೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜುಲೈ 3 ಶುಕ್ರವಾರ ಕೊನೆಯಾಗಲಿದೆ. ಭಾನುವಾರ ಹೇಗೂ ಲಾಕ್‌ಡೌನ್‌ ಇದೆ. ಹೀಗಾಗಿ ಜುಲೈ 7 ಮಂಗಳವಾರಿಂದ ಬೆಂಗಳೂರಿನಲ್ಲಿ ಮಾತ್ರ ಲಾಕ್‌ಡೌನ್‌ ಜಾರಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರಿನಲ್ಲಿ ಕೋವಿಡ್‌ 19 ತಡೆಗಟ್ಟಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ವಾರ ತಮ್ಮ ನಿವಾಸದಲ್ಲಿ ತಜ್ಞ ವೈದ್ಯರ ಜೊತೆ ಸಭೆ ನಡೆಸಿದ್ದರು. ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್, ಮುಖ್ಯಕಾರ್ಯದರ್ಶಿ ಶ್ರೀ ವಿಜಯ ಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ತಜ್ಞರು ಬೆಂಗಳೂರಿಗೆ ಅಂತರ್ ಜಿಲ್ಲೆ ಓಡಾಟಕ್ಕೆ ನಿರ್ಬಂಧ ಹಾಕಿ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ ರಸ್ತೆಗಳನ್ನು ಬಂದ್ ಮಾಡಿ. ಜಿಲ್ಲೆಗಳಿಂದ ಬೆಂಗಳೂರಿಗೆ ಉದ್ಯೋಗ, ಇನ್ನಿತರೆ ಕೆಲಸಕ್ಕೆ ಜನ ಜಾಸ್ತಿ ಬರುತ್ತಾರೆ. ಮೊದಲು ಬೆಂಗಳೂರಿನ ವಾಹನ ದಟ್ಟಣೆ ಜನ ದಟ್ಟಣೆ ಕಡಿಮೆ ಮಾಡಬೇಕು. ಇದು ತಕ್ಷಣ ಆಗಬೇಕು. ಬೆಂಗಳೂರಿಗೆ ಮೂರು ವಾರ ಹೊರ ಜಿಲ್ಲೆಯಿಂದ ಬರುವವರನ್ನು ಬಿಡಬೇಡಿ ಎಂದು ಸಲಹೆ ನೀಡಿದ್ದರು. ಅಂತರ್ ರಾಜ್ಯ ಓಡಾಟಕ್ಕೆ 3 ವಾರ ಕಡಿವಾಣ ಹಾಕಿದರೆ ಕೊರೊನಾ ಹರಡುವ ಪ್ರಮಾಣ ಕಡಿಮೆಯಾಗಬಹುದು ಎಂದು ಸಲಹೆ ನೀಡಿದ್ದರು. ಇದಕ್ಕೆ ಸಿಎಂ.”ಸಲಹೆ ಉತ್ತಮವಾಗಿದೆ ಮುಂದೆ ನೋಡೋಣ”ಎಂದು ಎಂದು ಅಂದು ಉತ್ತರಿಸಿದ್ದರೂ ಈಗ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಕೆಲ ತಜ್ಞರು ಮುಂದಿನ ರಣ ಭೀಕರ ಪರಿಸ್ಥಿತಿ ಎದುರಿಸಲು ಲಾಕ್ ಡೌನ್ ಅಸ್ತ್ರದ ಬಗ್ಗೆಯೂ ಪ್ರಸ್ತಾವನೆ ಮಾಡಿದ್ದರು. ನಿತ್ಯ ಒಂದು ಸಾವಿರ ಕೇಸ್ ಬಂದ್ರೆ ಲಾಕ್ ಡೌನ್ ಮಾಡಲೇಬೇಕು ಅಂದಿದ್ದಾರೆ. ಆದ್ರೇ ಲಾಕ್ ಡೌನ್‍ಗೆ ಮಾತ್ರ ಸಿಎಂ ಒಪ್ಪಲಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಭಾನುವಾರ ಒಂದೇ ದಿನ 783 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಹಿಂದೆ ತೆಗೆದುಕೊಂಡಿದ್ದ ವಿಚಾರದಲ್ಲಿ ಕೆಲ ಬದಲಾವಣೆ ಮಾಡುತ್ತಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *