ಸರ್ಕಾರ-ಖಾಸಗಿ ಶಾಲೆಗಳ ನಡುವೆ ಮುಂದುವರಿದ ಫೀಸ್ ಜಟಾಪಟಿ

Public TV
3 Min Read

-ಶಾಲಾ ಶುಲ್ಕ ಕಡಿತ ಆದೇಶ ವಾಪಸ್ಸಿಗೆ ಒಪ್ಪದ ಸರ್ಕಾರ

ಬೆಂಗಳೂರು: ಸರ್ಕಾರ, ಖಾಸಗಿ ಶಾಲೆಗಳ ನಡುವೆ ಫೀಸ್ ಫೈಟ್ ಮತ್ತೆ ಮುಂದುವರಿದಿದೆ. 30% ಶುಲ್ಕ ಕಡಿತದ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದು, ಆದೇಶ ವಾಪಸ್ ಪಡೆಯಲು ಡೆಡ್ ಲೈನ್ ಕೊಟ್ಟು ಪ್ರತಿಭಟನೆ ಎಚ್ಚರಿಕೆ ಕೊಟ್ಟಿವೆ. ಆದ್ರೆ ಇದಕ್ಕೆ ಡೋಂಟ್ ಕೇರ್ ಎಂದಿರೋ ಸರ್ಕಾರ ಮಾತುಕತೆ ಬನ್ನಿ ಅಂತ ಆಹ್ವಾನ ನೀಡಿದೆ.

ಶಾಲೆಯ ಶುಲ್ಕ ಗೊಂದಲ ಎಲ್ಲಾ ಮುಗೀತು ಅಂದುಕೊಳ್ಳುವಾಗಲೇ ಮತ್ತೆ ಖಾಸಗಿ ಶಾಲೆಗಳು ತಮ್ಮ ವರಸೆ ಪ್ರಾರಂಭ ಮಾಡಿವೆ. ಸರ್ಕಾರ ಹೊರಡಿಸಿರೋ ಶೇ.30 ಶುಲ್ಕ ಕಡಿತ ಆದೇಶ ವಾಪಸ್ ಪಡಯಬೇಕು ಅಂತ ಖಾಸಗಿ ಶಾಲೆಗಳು ಆಗ್ರಹ ಮಾಡಿವೆ. ಸರ್ಕಾರದ ಆದೇಶದ ಮರು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಿವೆ. ಸರ್ಕಾರ ಆದೇಶ ವಾಪಸ್ ಪಡಯದೇ ಹೋದ್ರೆ ಫೆಬ್ರವರಿ 23 ರಂದು ಹೋರಾಟ ಮಾಡೋ ಎಚ್ಚರಿಕೆ ಕೊಟ್ಟಿವೆ. ಕ್ಯಾಮ್ಸ್, ಕುಸ್ಮಾ, ಮಿಕ್ಸಾ, ಮಾಸ್, ಕುಮ್ಸಾ, ಎಬಿಇ ಸೇರಿ ಹಲವು ಸಂಘಟನೆಗಳು ಸರ್ಕಾರದ ಆದೇಶ ಶೇ.30 ಆಗಲ್ಲ. ಶೇ.50-60 ಕಡಿತ ಆಗುತ್ತೆ ಅಂತ ಹೊಸ ಲೆಕ್ಕ ಹೇಳ್ತಿವೆ. ಆದೇಶ ವಾಪಸ್ ಪಡೆಯದೇ ಹೋದ್ರೆ ಪ್ರತಿಭಟನೆ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿವೆ.

ಆದೇಶ ವಾಪಸ್ ಇಲ್ಲ: ಖಾಸಗಿ ಶಾಲೆಗಳ ಡೆಡ್‍ಲೈನ್‍ಗೆ ಸರ್ಕಾರ ಕೂಡಾ ತಿರುಗೇಟು ಕೊಟ್ಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯೋದಿಲ್ಲ. ಸರ್ಕಾರ ಮಾತುಕತೆಗೆ ಸಿದ್ದ. ಚರ್ಚಿಸಿ ನಿರ್ಧಾರ ಮಾಡೋಣ ಬನ್ನಿ ಅಂತ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಖಾಸಗಿ ಶಾಲೆಗಳ ಪ್ರತಿಭಟನೆ ತಂತ್ರಕ್ಕೆ ಸರ್ಕಾರದಿಂದಲೂ ಪ್ರತಿತಂತ್ರ ರೂಪಿಸ್ತಿದೆ. ಶುಲ್ಕ ಕಡಿತ ನಿರ್ಧಾರವನ್ನ ಕಾನೂನು ಅಡಿಯಲ್ಲೇ ಶಿಕ್ಷಣ ಇಲಾಖೆ ಮಾಡಿದೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ ಅಂತ ಹೇಳಿದೆ.

ಖಾಸಗಿ ತಂತ್ರಕ್ಕೆ ಸರ್ಕಾರದ ಪ್ರತಿತಂತ್ರ: ಸಾಂಕ್ರಾಮಿಕ ರೋಗಗಳ ಕಾಯ್ದೆ ನಿಯಮದಡಿ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿ ಶುಲ್ಕ ಕಡಿತ ಮಾಡಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಸರ್ಕಾರ ತನ್ನ ಅಧಿಕಾರ ಬಳಸಿ ಈ ಆದೇಶ ನೀಡಿದೆ. ವಿಶೇಷ ಸಂದರ್ಭಗಳಲ್ಲಿ ಶುಲ್ಕ ನಿರ್ಧಾರ ಅಧಿಕಾರ ಸರ್ಕಾರಕ್ಕಿದೆ, ಇದರ ಅನ್ವಯ ಶುಲ್ಕ ಕಡಿತವಾಗಿದ್ದು, ಈ ಆದೇಶವನ್ನ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಸರ್ಕಾರದ ಆದೇಶ ಪಾಲಿಸದಿದ್ರೆ, ಅಂತಹ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಸರ್ಕಾರದ ಆದೇಶ ಪಾಲನೆ ಮಾಡದಿದ್ರೆ, ಆ ಶಾಲೆಗಳ ಮಾನ್ಯತೆ ರದ್ದು ಮಾಡೋದು. ಶಾಲೆಗೆ ನೀಡಿರುವ ವಿವಿಧ ಸೌಲಭ್ಯ ಕಡಿತ ಮಾಡಲು ಸರ್ಕಾರ ನಿರ್ಧಾರ ಮಾಡಬಹುದು. ಈ ವರ್ಷ ತರಗತಿಯೇ ನಡೆಸಿಲ್ಲ. ಹೀಗಿರುವಾಗ ಹೆಚ್ಚು ಶುಲ್ಕ ಕೇಳುವ ಅಧಿಕಾರ ಖಾಸಗಿ ಶಾಲೆಗಳಿಗಿಲ್ಲ. ಆನ್‍ಲೈನ್ ತರಗತಿ ಇಡೀ ದಿನ ನಡೆದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಶುಲ್ಕ ಡಿಮ್ಯಾಂಡ್ ತಪ್ಪು ಎಂದು ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಬಹುದು.

ರೂಪ್ಸಾ ಬೆಂಬಲ ಇಲ್ಲ: ಇತ್ತ ಹಲವು ಖಾಸಗಿ ಶಾಲೆಗಳ ಸಂಘಟನೆಗಳು ನೀಡಿರೋ ಪ್ರತಿಭಟನೆಗೆ ನಾವು ಬೆಂಬಲ ಕೊಡಲ್ಲ ಅಂತ ರೂಪ್ಸಾ ಸಂಘಟನೆ ಹೇಳಿದೆ. ಸರ್ಕಾರದ ಆದೇಶ ನಾವು ಸ್ವಾಗತ ಮಾಡ್ತೀವಿ. ಫೆಬ್ರವರಿ 23 ರ ಹೋರಾಟಕ್ಕೆ ನಾವು ಬೆಂಬಲ ಕೊಡೊಲ್ಲ ಅಂತ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಸರ್ಕಾರ ಹಾಗೂ ಖಾಸಗಿ ಶಾಲೆಗಳ ಶುಲ್ಕ ಜಟಾಪಟಿಗೆ ಪೋಷಕರು, ವಿದ್ಯಾರ್ಥಿಗಳು ಬಲಿ ಆಗ್ತಿದ್ದಾರೆ. ಸಚಿವ ಸುರೇಶ್ ಕುಮಾರ್ ಮುಕ್ತವಾಗಿ ಚರ್ಚೆಗೆ ಬನ್ನಿ ಅಂತಿದ್ದಾರೆ. ಖಾಸಗಿ ಶಾಲೆಗಳು ಸಚಿವರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ತಾರಾ? ಅಥವಾ ಹೋರಾಟ ಮಾಡ್ತಾರಾ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *