Connect with us

Cinema

ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

Published

on

ಕಾಸ್ಟಿಂಗ್ ಕೌಚ್ ಎಂಬ ಕಾಯಿಲೆ ಎಲ್ಲ ಚಿತ್ರರಂಗಗಳನ್ನೂ ಸಾಂಕ್ರಾಮಿಕವೆಂಬಂತೆ ಆವರಿಸಿಕೊಂಡಿರೋದು ದುರಂತ ಸತ್ಯ. ಆಗಾಗ ಯಾರೋ ನಟಿ ಬೀದಿಯಲ್ಲಿ ನಿಂತು ಮಾತಾಡಿದಾಗ, ಅನಾಹುತಗಳಾದಾಗ ಮಾತ್ರವೇ ಈ ಬಗ್ಗೆ ಚರ್ಚೆಗಳಾಗಿ ತಣ್ಣಗಾಗುತ್ತಿತ್ತು. ಆದರೆ ಈ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ಅದುರುವಂತೆ ಮಾಡಿರೋದು ತೆಲುಗು ನಟಿ ಶ್ರೀರೆಡ್ಡಿಯ ದೆಸೆಯಿಂದ!

ಇದೀಗ ಎಲ್ಲ ಭಾಷೆಗಳ ನಟಿಯರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಈಗಿನ ಸರದಿ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್ ಅವರದ್ದು!

ಆದರೆ ಅನುಪಮಾ ಕಾಸ್ಟಿಂಗ್ ಕೌಚಿಂಗ್ ವಿಚಾರವಾಗಿ ಯಾರ ವಿರುದ್ಧವೂ ದೂರು ಹೇಳಿಲ್ಲ. ಅಂಥಾದ್ದೊಂದು ಇದ್ದರೂ ಇದ್ದೀತೆಂಬ ಮಾತನ್ನೂ ಆಡಿಲ್ಲ. ತನಗೆ ಇದುವರೆಗೂ ಅಂಥಾ ಅನುಭವಗಳಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇವರ ಈ ಅಭಿಪ್ರಾಯ ಯಾಕೆ ಮುಖ್ಯವೆಂದರೆ, ಅನುಪಮಾ 2016ರಿಂದಲೇ ತೆಲುಗು ಚಿತ್ರರಂಗದಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಹೆಮ್ಮಾರಿ ಸದ್ಯ ವಿರಾಟ್ ರೂಪ ತಾಳಿರೋದು ಕೂಡಾ ತೆಲುಗಿನಲ್ಲಿಯೇ ಆದ್ದರಿಂದ ಅನುಪಮಾ ಹೇಳಿಕೆ ಮುಖ್ಯವಾಗುತ್ತದೆ.

ಈಗಲೂ ಕೂಡಾ ಅನುಪಮಾ ನಟಿಸಿರೋ ತೆಲುಗು ಚಿತ್ರ ಹಲೋ ಗುರು ಪ್ರೇಮಂ ಕೋಸಮೇ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾನು ನಟಿಸಿರೋ ತೆಲುಗು ಚಿತ್ರಕ್ಕೆ ಹಿನ್ನಡೆಯಾಗುತ್ತದೆ ಎಂಬ ಮುಲಾಜಿನಿಂದ ಅನುಪಮಾ ಕಾಸ್ಟಿಂಗ್ ಕೌಚ್ ಬಗ್ಗೆ ಇಂಥಾ ಅಭಿಪ್ರಾಯ ಹೇಳಿರಬಹುದೆಂಬ ಮಾತುಗಳೂ ಕೇಳಿ ಬರುತ್ತಿರೋದು ಸುಳ್ಳಲ್ಲ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv