Bengaluru City

ನಿಮ್ಮಿಂದ ಕಲಿತ ಜೀವನ ಪಾಠವನ್ನು ಎಂದೂ ಮರೆಯಲ್ಲ ಅಮ್ಮ- ಅನು ಪ್ರಭಾಕರ್ ಕಂಬನಿ

Published

on

Share this

ಬೆಂಗಳೂರು: ಹಿರಿಯ ನಟಿ ಜಯಂತಿ ಸಾವಿನಿಂದಾಗಿ ಸ್ಯಾಂಡಲ್‍ವುಡ್‍ನಲ್ಲಿ ನೀರವ ಮೌನ ಆವರಿಸಿದ್ದು, ಇದೀಗ ಅತ್ತೆ ಅಗಲಿಕೆಯ ಬಗ್ಗೆ ಅನು ಪ್ರಭಾಕರ್ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗೂ ಹೃದಯದಲ್ಲಿ ಇರುತ್ತದೆ ಅಮ್ಮ. ನಿಮ್ಮಿಂದ ಕಲಿತ ಜೀವನದ ಪಾಠಗಳನ್ನು ನಾನು ಎಂದೂ ಮರೆಯಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದ ಬಗ್ಗೆ ಎಷ್ಟೋ ಸರಿ ನನ್ನ ಹತ್ತಿರ ಮಾತನಾಡಿದ್ದಿರಿ. ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗಲಿದ ಅನೇಕ ಹಿರಿಯ ಕಲಾವಿದರ ಸಾಲಿಗೆ ಜಯಮ್ಮ ಸೇರಿಬಿಟ್ಟರು: ಜಗ್ಗೇಶ್

ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಜಯಂತಿ(76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಆಗಿದ್ದರು. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಇದನ್ನೂ ಓದಿ: ಮೋಸವಾಗಿತ್ತು, ಹಸಿ ಹಸಿಯಾಗಿ ಬಲಿಯಾದರು: ಪತ್ರಕರ್ತ ಗಣಪತಿ

ಬನಶಂಕರಿಯ ಸ್ವಗ್ರಹದಲ್ಲಿ ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಜಯಂತಿ ಅವರು, ಬೆಳಗ್ಗೆ ಎದ್ದೇಳಲೇ ಇಲ್ಲ, ರಾತ್ರಿ ಹೇಗೆ ಈ ಘಟನೆ ಸಂಭವಿಸಿತು ಗೊತ್ತಿಲ್ಲ. ಬೆಳಗ್ಗೆ ಎದ್ದೇಳಿಸೋಕೆ ನೋಡಿದೆವು ನಮಗೆ ಆಗಲೇ ತಿಳಿದಿದ್ದು, ಹೃದಯಾಘಾತವಾಗಿರಬಹುದೇನೋ ಗೊತ್ತಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಈಗೇನೂ ಗೊತ್ತಾಗ್ತಾ ಇಲ್ಲ ಎಂದು ಜಯಂತಿ ಪುತ್ರ ಕೃಷ್ಣ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಛೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇದ್ದುದ್ದರಿಂದ ಚಂದ್ರಕಲಾರವರ ನೃತ್ಯಶಾಲೆಗೆ ಸೇರಿಸಿದರು. ಇಲ್ಲಿ ಜಯಂತಿಯವರ ಸಹಪಾಠಿಯಾಗಿದ್ದ ಮನೋರಮಾರವರು ಮುಂದೆ ಪ್ರಖ್ಯಾತ ತಮಿಳು ನಟಿಯಾದರು. ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ ‘ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement