Connect with us

Bengaluru Rural

ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

Published

on

ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ.

ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ ಇಡೀ ದೇಹದ ಮೇಲೆ ದಾಳಿ ನಡೆಸಿದ್ದರಿಂದ ಅನೇಕ ಕಡೆ ಗಾಯಗಳಾಗಿವೆ. ಇರುವೆಗಳು ಕಚ್ಚುತ್ತಿವೆ ಎನ್ನುವ ಅರಿವು ಇಲ್ಲದೇ ತಿಮ್ಮರಾಜು ಬಿದ್ದಿದ್ದನು.

 

ಇರುವೆ ಕಚ್ಚುತ್ತಿದ್ದರೂ ಹಾಗೇ ಮಲಗಿದ್ದನ್ನು ನೋಡಿದ ಗ್ರಾಮಸ್ಥರೊಬ್ಬರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ವಿಷಯ ತಿಳಿದು ಗುಂಪುಗೂಡಿದ ಗ್ರಾಮಸ್ಥರು, ತಿಮ್ಮರಾಜುನನ್ನು ಎಚ್ಚರಿಸಿದ್ದಾರೆ. ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಭಾರೀ ಅನಾಹುತದಿಂದ ಪಾರಾಗಿದ್ದಾನೆ. ರಾತ್ರಿ ವೇಳೆ ಜನ ಮಲಗಿರುವಾಗ ಘಟನೆ ನಡೆದಿದ್ದರೇ ತಿಮ್ಮರಾಜು ಬದುಕುಳಿಯುವುದು ಕಷ್ಟವಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸದ್ಯ ಗಾಯಾಳು ತಿಮ್ಮರಾಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ರೇಷನ್ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಅನಾಹುತ ಸಂಭವಿಸಿದೆ. ಅಕ್ರಮ ಮದ್ಯ ಮಾರುವ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.