Connect with us

International

ಕೊರೊನಾ ಆಯ್ತು, ಈಗ ಹ್ಯಾಂಟ ವೈರಸ್ – ಓರ್ವ ಸಾವು

Published

on

– ಏನಿದು ಹ್ಯಾಂಟ ವೈರಸ್?

ಬೀಜಿಂಗ್: ಈಗಾಗಲೇ ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ವೈರಸ್‍ಗೆ ಈಗಾಗಲೇ ಚೀನಾದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಮತ್ತೊಂದು ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಈ ವೈರಸ್‍ಗೆ ಓರ್ವ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಹ್ಯಾಂಟ ವೈಸರ್ ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್. ಈ ವೈಸರ್‍ನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮಾದ್ಯಮವೊಂದು ಟ್ವೀಟ್ ಮಾಡಿದೆ. ಹೀಗಾಗಿ ಜನರು ಯಾವುದು ಈ ವೈರಸ್ ಎಂಬ ಆತಂಕ ಪಡುತ್ತಿದ್ದಾರೆ. ಅಲ್ಲದೇ ಟ್ವಿಟ್ಟರಿನಲ್ಲಿ ಹ್ಯಾಂಟ ವೈರಸ್ ನಂಬರ್ 1 ಟ್ರೆಂಡಿಂಗ್‍ನಲ್ಲಿದೆ.

“ಚೀನಾದ ಯುನಾನ್ ಪ್ರಾಂತ್ಯದ ವ್ಯಕ್ತಿಯೊಬ್ಬರು ಸೋಮವಾರ ಬಸ್ಸಿನಲ್ಲಿ ಕೆಲಸಕ್ಕಾಗಿ ಶಾಂಡೊಂಗ್ ಪ್ರಾಂತ್ಯಕ್ಕೆ ಹೋಗುತ್ತಿದ್ದಾಗ ಮೃತಪಟ್ಟಿದ್ದಾರೆ. ವ್ಯಕ್ತಿಯಲ್ಲಿ ಹ್ಯಾಂಟವೈರಸ್ ಇದ್ದ ಬಗ್ಗೆ ಪಾಸಿಟಿವ್ ವರದಿ ಬಂದಿದೆ. ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 32 ಜನರನ್ನು ಪರೀಕ್ಷೆ ಮಾಡಲಾಗಿದೆ” ಎಂದು ಗ್ಲೋಮಲ್ ಟೈಮ್ಸ್ ವರದಿ ಮಾಡಿದೆ.

ಇದರಿಂದ ಕೆಲವು ಜನರು ಇದನ್ನು ಹೊಸ ವೈರಸ್ ಎಂದುಕೊಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಹ್ಯಾಂಟ ವೈರಸ್?
ಹ್ಯಾಂಟ ವೈರಸ್ ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ ಅಲ್ಲ. ಇದು ಕಳೆದ 7 ವರ್ಷಗಳಿಂದ ಇದೆ. ಮೊದಲಿಗೆ ಹ್ಯಾಂಟ ವೈರಸ್ ಸೋಂಕು ದಂಶಕ (ಇಲಿ ಜಾತಿಯ ಪ್ರಾಣಿಗಳು) ಗಳಿಗೆ ತಗಲುತ್ತೆ. ಆದರೆ ದಂಶಕಗಳಿಗೆ ಯಾವುದೇ ರೀತಿಯ ರೋಗ ಬರುವುದಿಲ್ಲ. ಆದರೆ ಈ ಪ್ರಾಣಿಗಳ ಮಲ, ಮೂತ್ರ, ಲಾಲಾರಸಗಳನ್ನು ಮನುಷ್ಯರು ಸ್ಪರ್ಶಿಸಿದಾಗ ಈ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಈ ಹ್ಯಾಂಟ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ. ಅಲ್ಲದೇ ಮನುಷ್ಯನಿಂದ ಮನುಷ್ಯನಿಗೂ ಹರಡುವುದಿಲ್ಲ.

ಹ್ಯಾಂಟ ವೈರಸ್‍ನ ಲಕ್ಷಣಗಳು?
ಹ್ಯಾಂಟ ವೈರಸ್ ಸೋಂಕು ಇರುವವರಿಗೆ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ತಲೆ, ಕೈ-ಕಾಲು ನೋವು ಬರುತ್ತದೆ. ಆಯಾಸ, ತಲೆ ಸುತ್ತುವುದು, ಶೀತ, ವಾಂತಿ, ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ದಿನಗಳ ನಂತರ ಉಸಿರಾಟಕ್ಕೆ ತೊಂದರೆಯಾಗಿ ಜೀವನಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಚೀನಾದಲ್ಲಿ ಇಲಿ, ಬಾವಲಿಗಳನ್ನು ತಿನ್ನುತ್ತಾರೆ. ಹೀಗಾಗಿ ಈ ವೈರಸ್ ಬರುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವೈರಸ್‍ಗೆ ಸಂಬಂಧಪಟ್ಟಂತೆ ಸುಳ್ಳು ಸುಳ್ಳು ವದಂತಿಗಳು ಹಬ್ಬುತ್ತಿದೆ.