Wednesday, 23rd October 2019

Recent News

ಐಎಂಎ ಮಾಲೀಕನ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು

ಬೆಂಗಳೂರು: ಈಗಾಗಲೇ ವಂಚನೆ ಆರೋಪ ಎದುರಿಸುತ್ತಿರುವ ಐಎಂಎ ಮಾಲೀಕ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ ಎಂಬವರು ಮನ್ಸೂರ್ ಖಾನ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರಿಂದ ಮಾತ್ರವಲ್ಲದೆ, ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಗೂ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಮನ್ಸೂರ್ ಖಾನ್ ನನ್ನ ಬಳಿ ಸುಮಾರು 9.80 ಕೋಟಿ ರೂ. ಮೌಲ್ಯದ ಚಿನ್ನವನ್ನು ಖರೀದಿಸಿದ್ದರು. ಬಳಿಕ ಕಂಪನಿ ಹೆಸರಲ್ಲಿ ಚೆಕ್ ನೀಡಿ, ನಾಳೆ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದರೆ ಹಣ ಡ್ರಾ ಮಾಡಿಕೊಳ್ಳುವ ಹಿಂದಿನ ದಿನವೇ ಮನ್ಸೂರ್ ಖಾನ್ ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾರೆ ಎಂದು ಅಂಕಿತ್ ಸಾಂಘ್ವಿ ದೂರಿದ್ದಾರೆ.

ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಇಲ್ಲಿವರೆಗೂ ಒಟ್ಟು 6 ಎಫ್‍ಐಆರ್ ಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.

ಸಾರ್ವಜನಿಕರಿಗೆ ವಂಚಿಸಿದ್ದು ಹೇಗೆ?
ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು. ಈ ಬೆನ್ನಲ್ಲೇ ಮನಸೂರ್ ಖಾನ್ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಹಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *