Connect with us

Bengaluru City

ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದರೆ ಸುಮ್ಮನಿರಲ್ಲ- ಸಿದ್ದರಾಮಯ್ಯ

Published

on

ಬೆಂಗಳೂರು: ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿ ಆ ಹಣವನ್ನು ಕೃಷಿ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಬಂದಿದ್ದು, ಸರ್ಕಾರ ಇಂತಹ ನಿರ್ಧಾರ ಕೈಗೊಂಡಲ್ಲಿ ಸದನದ ಹೊರಗೆ ಹಾಗೂ ಒಳಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಬಡತನ ರೇಖೆಗಿಂತ ಕೆಳಗಿದ್ದ 4 ಕೋಟಿ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆದರೆ ಬಿಜೆಪಿ ಸರ್ಕಾರ ಅನ್ನಭಾಗ್ಯದ ಯೋಜನೆಯಡಿ ನೀಡುವ ಅಕ್ಕಿಯನ್ನು 7 ಕೆ.ಜಿ.ಗಿಂತ ಕಡಿಮೆ ಮಾಡುವ ಕುರಿತು ಚರ್ಚೆ ನಡೆಸಿದೆ. ಅನ್ನಭಾಗ್ಯದಲ್ಲಿ ಉಳಿದ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಲು ಮುಂದಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ ರೂ.ನೀಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಬಡವರ ಅಕ್ಕಿ ಕಡಿತ ಮಾಡಿ ಹಣ ಕೊಡುವುದು ಬಡವರ ವಿರೋಧಿ ಚಿಂತನೆ ಆಗಿದೆ ಎಂದು ಕಿಡಿ ಕಾರಿದ್ದಾರೆ.

ನಾನು ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದರೆ ಪ್ರತಿಯೊಬ್ಬರಿಗೆ 10 ಕೆ.ಜಿ ಕೊಡುವ ಚಿಂತನೆ ಮಾಡಿದ್ದೆ. ಆದರೆ ಬಿಜೆಪಿಯವರು ಇದೀಗ ಪ್ರತಿಯೊಬ್ಬರಿಗೆ 7 ಕೆ.ಜಿ. ನೀಡುತ್ತಿರುವುದರಲ್ಲಿಯೂ ಕಡಿಮೆ ಮಾಡುತ್ತಿದ್ದಾರೆ. ಈ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದ್ದಾರೆ. ಇದು ಬಡವರಿಗಾಗುವ ಅನ್ಯಾಯ, ಅನ್ನಭಾಗ್ಯ ಅಕ್ಕಿ ಕಡಿತ ಮಾಡಿದಲ್ಲಿ ಕಾಂಗ್ರೆಸ್ ಸಹಿಸುವುದಿಲ್ಲ. ಈ ಕುರಿತು ತೀವ್ರ ಹೋರಾಟ ಮಾಡುತ್ತೇವೆ. ಸರ್ಕಾರ ಕೂಡಲೇ ಈ ಚಿಂತನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಇಂದಿರಾ ಕ್ಯಾಂಟೀನ್‍ನಲ್ಲೂ ಗುಣಮಟ್ಟದ ಆಹಾರ ಸಿಗಬೇಕು. ಅದರ ಸಂಪೂರ್ಣ ವೆಚ್ಚ ಸರ್ಕಾರ ಭರಿಸಬೇಕು. ಇದು ಸಹ ಬಡವರಿಗೆ, ಹಸಿದವರಿಗೆ ರಿಯಾಯಿತಿ ದರದಲ್ಲಿ ಮಾಡಿದ ಕಾರ್ಯಕ್ರಮ. ಬೆಂಗಳೂರಿನ ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಆಗಬೇಕಿದೆ. ಇಂದಿರಾ ಕ್ಯಾಂಟೀನ್‍ಗೆ ಸರ್ಕಾರದಿಂದ ಹಣ ನೀಡಲು ಆಗಲ್ಲ. ನೀವೇ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಗೆ 200 ಕೋಟಿ ರೂ.ಗಳೂ ಖರ್ಚಾಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ಇದು ನಿರಂತರವಾಗಿ ನೆಡೆಯಬೇಕು ಎಂದು ಆಗ್ರಹಿಸಿದರು.

2.30 ಲಕ್ಷ ಕೋಟಿ ರೂ. ರಾಜ್ಯದ ಬಜೆಟ್ ಇದೆ. ಕಾಲೇಜು ವಿಧ್ಯಾರ್ಥಿಗಳಿಗೆ, ಆಸ್ಪತ್ರೆಗಳ ಕಡೆ ಇದು ತುಂಬಾ ಅನುಕೂಲ ಆಗಿದೆ. ಜೊತೆಗೆ ಕಾಲೇಜು, ಆಸ್ಪತ್ರೆಗಳ ಕಡೆ ಈ ಯೋಜನೆ ಮುಂದುವರೆಸಿ ಎಂದು ಬೇಡಿಕೆ ಹೆಚ್ಚಿದೆ. ಹೀಗಾಗಿ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆ ಬಿಟ್ಟರೆ ನಾನು ಸುಮ್ಮನಿರಲ್ಲ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರವೇ ಇಲ್ಲ:
ಬಿಎಸ್‍ವೈ ಮುಖ್ಯಮಂತ್ರಿಯಾಗಿ 22 ದಿನ ಆಯ್ತು, ರಾಜ್ಯದಲ್ಲಿ ಸರ್ಕಾರವೇ ಇಲ್ಲ. ರಾಜ್ಯದ 7 ಜಿಲ್ಲೆಯ 42 ತಾಲೂಕಿನಲ್ಲಿ ತೀವ್ರ ತರನಾದ ಬರ ಇದೆ. ವಾಡಿಕೆ ಮಳೆಗಿಂತ ಶೇ.20 ಕೊರತೆಯಾಗಿದೆ.
ಆದರೆ, ಈವರೆಗೆ ಆ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಫೆಬ್ರವರಿಯಿಂದ ಕೇಂದ್ರ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಮೋದಿ ಬಡವರ ಪರ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಎಲ್ಲಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ನಾವು ಮನವಿ ಕೊಟ್ಟಿರುವ ಅನುದಾನವನ್ನೇ ಕೇಂದ್ರ ನೀಡಿಲ್ಲ. ಈಗ ಹೇಗೆ ನೆರವು ಘೋಷಿಸುತ್ತದೆ. ಅಭಿವೃದ್ಧಿ, ಬರ, ಪ್ರವಾಹದ ಬಗ್ಗೆ ಮಾತುಕತೆಯೇ ಇಲ್ಲ. ಕೇವಲ ಭಾವನಾತ್ಮಕವಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾತಂತ್ರ್ಯ ದಿನವನ್ನು ಆಚರಿಸಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಕೇವಲ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದಾರೆ, ಇದು ಸರ್ಕಾರಕ್ಕೆ ನಾಚಿಕೆಗೇಡು ಎಂದು ಗುಡುಗಿದರು.

ಪ್ರವಾಹ ಪರಿಸ್ಥಿತಿಯನ್ನು ಪ್ರಧಾನಿಯವರೇ ಸ್ವತಃ ಬಂದು ಪರಿಶೀಲಿಸಬೇಕಿತ್ತು. ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಹೋಗಲಿ ಎಷ್ಟು ನಷ್ಟವಾಗಿದೆ ಎಂಬ ಸರ್ವೆಯನ್ನೇ ಮಾಡಿಸಿಲ್ಲ. ನಷ್ಟದ ಅಂದಾಜಿನ ಬಗ್ಗೆ ವರದಿಯನ್ನೇ ಕೇಂದ್ರಕ್ಕೆ ನೀಡಿಲ್ಲ. ನಿನ್ನೆ ನರೇಂದ್ರ ಮೋದಿಯವರನ್ನು ಬಿಎಸ್‍ವೈ ಭೇಟಿ ಮಾಡಿದ್ದಾರೆ. ಪ್ರಧಾನಿ ಒಂದೇ ಒಂದು ಭರವಸೆ ನೀಡಿಲ್ಲ. ನೆರವು ಕೊಡ್ತಾರೆ ಎಂದು ಇವರೇ ಹೇಳಿಕೊಂಡಿದ್ದಾರೆ. ಇವರು ಕೇಂದ್ರಕ್ಕೆ ವರದಿ ನೀಡುವುದು ಯಾವಾಗ, ಕೇಂದ್ರದಿಂದ ಪರಿಹಾರ ಬರುವುದು ಯಾವಾಗ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಸೋಮವಾರದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಹೋಗುತ್ತೇನೆ. ಕೇಂದ್ರ ಸರ್ಕಾರ ಈ ಕೂಡಲೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಯಡಿಯೂರಪ್ಪನವರಿಗೆ ಮೋದಿ ಕಂಡರೆ ಹೆದರಿಕೆ ಅನ್ನಿಸುತ್ತೆ. ನಾನು ಹಿಂದೆ ನಿಯೋಗ ಕರೆದೋಯ್ಯುತ್ತಿದ್ದೆ. ಆಗಲೂ ಬಿಎಸ್‍ವೈ, ಮೋದಿ ಎದುರು ಮಾತನಾಡುತ್ತಿರಲಿಲ್ಲ. ಹೋಗಲಿ ಈಗಲಾದ್ರೂ ಸರ್ವ ಪಕ್ಷ ಸಭೆ ಕರೆಯಲಿ. ಸರ್ವ ಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಲಿ. ಇವರು ಮಾತನಾಡದಿದ್ದರೂ, ನಾವೇ ಮಾತನಾಡುತ್ತೇವೆ ಎಂದು ಬಿಎಸ್‍ವೈ ವಿರುದ್ಧ ಹರಿಹಾಯ್ದರು.

ಕಣ್ಣು, ಕಿವಿ ಇಲ್ಲದ ಸರ್ಕಾರ:
ಕಣ್ಣು, ಕಿವಿ ಇಲ್ಲದ ಇಂತಹ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ. ಪ್ರಧಾನ ಮಂತ್ರಿಗಳು ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. 1 ಲಕ್ಷ ಕೋಟಿ ರೂ. ನಷ್ಟ ಆಗಿದೆ. ಇಷ್ಟು ನಿರ್ಲಜ್ಜವಾದ, ನಾಚಿಕೆಗೇಡಿನ ಸರ್ಕಾರವನ್ನು ನಾನೂ ನೋಡಿರಲಿಲ್ಲ. ಪ್ರಧಾನಿಗಳು ಪ್ರವಾಹದ ವಿಚಾರವನ್ನು ಕಾಟಾಚಾರ ಎಂಬಂತೆ ತೆಗೆದುಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರವೇಕೆ ಈವರೆಗೆ ವರದಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ನೀವ್ಯಾಕೆ ಇರೋದು?
ಸಚಿವ ಸಂಪುಟದ ಕುರಿತು ಪ್ರಶ್ನಿಸಿದರೆ, ಬಿಎಸ್‍ವೈ ಸಚಿವರಿಲ್ಲದಿದ್ದರೇನಂತೆ ಅಧಿಕಾರಿಗಳಿದ್ದಾರೆ ಎಂದು ಹೇಳುತ್ತಾರೆ. ಅಧಿಕಾರಿಗಳಿರುವುದಾದರೆ ಮುಖ್ಯಮಂತ್ರಿಗಳೇಕೆ ಇರಬೇಕು. ನಿಮ್ಮ ಪರವಾಗಿ ಪ್ರಧಾನ ಕಾರ್ಯದರ್ಶಿಗಳು ಕೆಲಸ ಮಾಡುತ್ತಾರೆ. ಅವರೇ ಅಧಿಕಾರ ನಡೆಸುತ್ತಾರೆ, ನಿಮಗೇಕೆ ಅಧಿಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.