Connect with us

Cricket

ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

Published

on

ಮುಂಬೈ: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಕುಂಬ್ಳೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದು ಯಾಕೆ ಎನ್ನುವುದಕ್ಕೆ ಈಗ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಅಸಮಾಧಾನಗಳು ಒಂದೊಂದಾಗಿ ಹೊರ ಬರುತ್ತಿದೆ.

ಫೈನಲ್‍ನಲ್ಲಿ ಪಾಕ್ ವಿರುದ್ಧ 180 ರನ್‍ಗಳಿಂದ ಸೋತಿದ್ದಕ್ಕೆ ಕೋಚ್ ಅನಿಲ್ ಕುಂಬ್ಳೆ ಗರಂ ಆಗಿ ಟೀಂ ಇಂಡಿಯಾ ಆಟಗಾರನ್ನು 30 ನಿಮಿಷ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದರಿಂದ ನೊಂದ ಕ್ರಿಕೆಟಿಗರು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ದೂರು ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕುಂಂಬ್ಳೆ ಕ್ಲಾಸ್ ಹೀಗಿತ್ತಂತೆ!
ಮ್ಯಾಚ್ ಬಳಿಕ ಒಬ್ಬೊಬ್ಬರೇ ಆಟಗಾರರನ್ನು ಕರೆದು ಕುಂಬ್ಳೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಹಿರಿಯ ಆಟಗಾರರನ್ನು ಉದಾಹರಿಸಿ ಚೆನ್ನಾಗಿ ಕ್ಲಾಸ್ ಮಾಡಿದ್ದಾರೆ. ತಂಡದ ಬೌಲರ್‍ಗಳ ಬಗ್ಗೆ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿ ಫುಲ್ ಕ್ಲಾಸ್ ಮಾಡಿದ್ದಾರೆ. ಕುಂಬ್ಳೆ ಕಟು ಪದಗಳಿಂದ ಟೀಕಿಸಿದ್ದಕ್ಕೆ ಆಟಗಾರರು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಆರಂಭಗೊಳ್ಳುವ ಎರಡು ದಿನದ ಮೊದಲು ಕೊಹ್ಲಿ ಮತ್ತು ಕುಂಬ್ಳೆ ನಡುವೆ ವಾಗ್ವಾದ ನಡೆದಿತ್ತು ಎನ್ನುವ ವಿಚಾರವನ್ನು ಮಾಧ್ಯಮಗಳು ವರದಿ ಮಾಡಿವೆ. ಕೋಚ್ ಕುಂಬ್ಳೆಗೆ ನಿಮ್ಮ ಪರ ನಮ್ಮ ತಂಡದ ಆಟಗಾರರಿಗೆ ಒಲವು ಇಲ್ಲ. ನೀವು ಕೋಚ್ ಆಗಿ ಮುಂದುವರಿಯಲು ನಾನೂ ಸೇರಿದಂತೆ ಆಟಗಾರರ ಒಮ್ಮತವಿಲ್ಲ ಎಂದು ಕುಂಬ್ಳೆಗೆ ಆಟಗಾರರ ಎದುರೇ ಕೊಹ್ಲಿ ನಿಂದಿಸಿದ್ದಾರೆ. ಕೊಹ್ಲಿ ಮಾತಿನಿಂದ ಆಕ್ರೋಶಗೊಂಡ ಕುಂಬ್ಳೆ, ಕೋಚ್ ಆಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನೀನು ಸುಮ್ಮನೆ ಇರು ಎಂದು ಕೊಹ್ಲಿಗೆ ತಿರುಗೇಟು ನೀಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಧರ್ಮಶಾಲಾ ಟೆಸ್ಟ್ ನಿಂದ ಭಿನ್ನಮತ ಆರಂಭ?
ಕೊಹ್ಲಿ ಮತ್ತು ಕುಂಬ್ಳೆ ಮಧ್ಯೆ ಮೊದಲು ಅಸಮಾಧಾನ ಸ್ಫೋಟಗೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ 4 ಟೆಸ್ಟ್ ಪಂದ್ಯ ಕಾರಣ ಎಂದು ಹೇಳಲಾಗುತ್ತಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕೊಹ್ಲಿ ನಾಲ್ಕನೇಯ ಟೆಸ್ಟ್ ಆಡಿರಲಿಲ್ಲ. ಹೀಗಾಗಿ ಟೀಂ ಇಂಡಿಯಾವನ್ನು ಅಜಿಂಕ್ಯಾ ರೆಹಾನೆ ಮುನ್ನಡೆಸಿದ್ದರು. ಈ ಪಂದ್ಯಕ್ಕೆ ಕುಂಬ್ಳೆ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನವನ್ನು ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನ ನೀಡಿದ್ದು ನಾಯಕ ಕೊಹ್ಲಿ ಇಷ್ಟವಿರಲಿಲ್ಲ. ಸ್ಥಾನ ನೀಡಿದ್ದನ್ನು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ. ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಕುಲ್‍ದೀಪ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು. ಆಗ್ರ ಬ್ಯಾಟ್ಸ್ ಮನ್‍ಗಳನ್ನು ಪೆವಿಲಿಯನ್ ಗೆ ಕಳುಹಿಸಿದ್ದ ಕುಲ್‍ದೀಪ್ ಯಾದವ್‍ಗೆ ಈ ಪಂದ್ಯದಲ್ಲಿ ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಕುಂಬ್ಳೆ ಪರ ಹಿರಿಯರ ಬ್ಯಾಟಿಂಗ್: ಕುಂಬ್ಳೆ ಮಾಜಿ ಆಟಗಾರರದಾದ ಬಿಷನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಬ್ಯಾಟಿಂಗ್ ಮಾಡಿದ್ದಾರೆ. ಕುಂಬ್ಳೆ ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ, ಒಂದು ವೇಳೆ ಟೀಂ ಇಂಡಿಯಾ ಆಟಗಾರರಿಗೆ ಮೃದು ಸ್ವಭಾವದ ಕೋಚ್ ಬೇಕಿದ್ದರೆ ಕುಂಬ್ಳೆ ಹೋಗಿದ್ದೇ ಒಳ್ಳೆಯದು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

ಅಭಿನವ್ ಬಿಂದ್ರಾ ಬ್ಯಾಟಿಂಗ್:
ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಟ್ವೀಟ್ ಮಾಡಿ ಪರೋಕ್ಷವಾಗಿ ಕೊಹ್ಲಿಗೆ ಟಾಂಗ್ ನೀಡಿದ್ದಾರೆ. ನನ್ನ ದೊಡ್ಡ ಟೀಚರ್ ನನ್ನ ಕೋಚ್, ನಾನು ಅವರನ್ನು ದ್ವೇಷಿಸುತ್ತಿದ್ದೆ. 20 ವರ್ಷಗಳ ಕಾಲ ನಾನುದ ಅವರೊಂದಿಗೆ ಇದ್ದೆ. ನನಗೆ ಇಷ್ಟವಾಗದ ವಿಚಾರಗಳನ್ನು ಅವರು ಹೇಳುತ್ತಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.