Connect with us

Crime

ನೀರು ಹಿಡಿಯುವ ವಿಚಾರವಾಗಿ ಶುರುವಾದ ಜಗಳಕ್ಕೆ ಮಹಿಳೆ ಬಲಿ

Published

on

ಹೈದರಾಬಾದ್: ಸಾರ್ವಜನಿಕ ನಲ್ಲಿಯಲ್ಲಿ ನೀರಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಸೋಮಪೇಟ ಪಟ್ಟಣದ ಪಲ್ಲಿವೇದಿ ಪ್ರದೇಶದ ನಿವಾಸಿ ಪಟಿಪುಡಿ ಪದ್ಮ(38) ಮೃತ ದುರ್ದೈವಿ. ನೀರು ಹಿಡಿಯುವ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಕ್ಕೆ ಪದ್ಮ ಜೀವ ಕಳೆದುಕೊಂಡಿದ್ದಾರೆ. ಪಲ್ಲಿವೇದಿ ಪ್ರದೇಶದ ಶಾಲೆಯೊಂದರ ಬಳಿ ಇದ್ದ ಸಾರ್ವಜನಿಕ ನಲ್ಲಿಯ ನೀರಿಗಾಗಿ ಸುತ್ತಮುತ್ತಲ ಜನ ಬರುತ್ತಾರೆ.

ನೀರು ತರಲು ಪದ್ಮ ನಲ್ಲಿಯ ಬಳಿ ತೆರೆಳಿದ್ದರು. ಅಲ್ಲಿ ನೀರಿಗಾಗಿ ಎಲ್ಲರು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಸ್ಥಳಿಯ ನಿವಾಸಿಯಾಗಿದ್ದ ತೆಪ್ಪಲ ಸುಂದರಮ್ಮನ ಹಾಗೂ ಪದ್ಮ ನಡುವೆ ಜಗಳ ನಡೆದಿದೆ. ಮೊದಲು ಮಾತಿನಿಂದ ಶುರುವಾಗಿದ್ದ ಜಗಳ ಕೊನೆಗೆ ಒಂದು ಜೀವ ತೆಗೆಯುವ ಮಟ್ಟಿಗೆ ಬಂದಿದೆ.

ಜಗಳವಾಡುತ್ತಾ ಇಬ್ಬರು ಮಹಿಳೆಯರು ನೀರು ಹಿಡಿಯಲು ತಂದಿದ್ದ ಕೊಡಪಾನ, ಪಾತ್ರೆಗಳಿಂದ ಹೊಡೆದಾಡಿಕೊಳ್ಳಲು ಆರಂಭಿಸಿದ್ದಾರೆ. ಪರಿಣಾಮ ಪದ್ಮ ಅವರ ತಲೆ ಹಾಗೂ ಎದೆಗೆ ತೀವ್ರವಾಗಿ ಹೊಡೆತ ಬಿದ್ದಿದ್ದು, ರಸ್ತೆಯಲ್ಲೇ ತಕ್ಷಣ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದವರು ಏನಾಯ್ತು ಎಂದು ನೋಡುವಷ್ಟರಲ್ಲಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.